Friday, May 28, 2010

ಕನ್ನಡಿಯಲ್ಲಿ ಕಂಡ ಮುಖ

ಒಂದೂರಲ್ಲಿ
ಗಂಡ - ಹೆಂಡತಿ
ಸುಖವಾಗಿದ್ದರು

ಅವಳ
ತವರುಮನೆ ಪೆಟ್ಟಿಗೆಯಲ್ಲಿ
ಪಿಜ್ಜನ ಕಾಲದೊಂದು
ಕನ್ನಡಿ ಇತ್ತು, ಅವಳಿಗೇ
ಗೊತ್ತಿಲ್ಲದ ಹಾಗೆ ಹೇಗೋ
ಬಂದು ಸೇರಿಕೊಂಡಿತ್ತು

ಒಂದು ದಿನ, ಪೆಟ್ಟಿಗೆ ತೆರೆದು
ನೋಡಿದರೆ,
ಎದುರು ಕನ್ನಡಿ -
ದುರುಗುಟ್ಟಿ ನೋಡುತ್ತಿದೆ

ಕಿರುಚಿ ಕಿಟಾರನೆ, ಉರಿದುರಿದು
ಬಿದ್ದು, ಅಂಗೈ ನೆಲಕ್ಕೆ ಬಡಿದು,
ಮನಸಾರೆ ಶಪಿಸಿ, ಹಾಳಾಗಿ ಹೋದೆ
ಯಲ್ಲೋ ನನಗಂಡ ಮುಂಡೇಗಂಡ ಅಂತ
ಗುಟ್ಟಾಗಿ ಬಯ್ದು ಮೈತುಂಬ ಅತ್ತಳು

ಮತ್ತೊಂದು ದಿನ, ಅವನಿಗದು ಹೇಗೋ ಸಿಕ್ಕಿತು
ನೋಡಿದರೆ,
ನೋಡಿತು ಕೆಂಡಾಮಂಡಲ

ಕೂಡಲೇ ಅಂವಾ ಅದನ್ನು
ಹಿಡಿದೊಯ್ದು ಬಯಲಲ್ಲಿತ್ತು ಒದ್ದು ಪುಡಿಗುಟ್ಟಿ
"ಥೂ" ಉಗುಳಿದ.

ಇನ್ನೊಂದು ದಿನ, ಅವಳು
ಹುಡುಕುತ್ತಿದ್ದಳು
ಅವನು, "ಏನು?" ಎಂದು, ಅವಳು "ಏನಿಲ್ಲ" ಎಂದು
ಉಗುಳು ನುಂಗಿಕೊಂಡು ಪರಸ್ಪರ
ನೋಡಿ ನಕ್ಕರು

ಮುಂದೆ,
ಸುಖವಾಗಿರುವ ಹಾಗೆ
ನಟಿಸುತ್ತ
ಸುಖವಾಗಿದ್ದರು.

ಒಂದು ಹೆಸರಿಲ್ಲದ ಪದ್ಯ

ರಷಿಯ ದೇಶದ ಯಾವುದೋ
ಸುಡುಗಾಡು ಊರಲ್ಲಿ ಒಂದು
ಭಲೇ ಮೋಜಿನ ಪದ್ಧತಿ
ಇದೆಯಂತೆ -

ಮನೆಯಲ್ಲಿ ಯಾರಾದರೊಬ್ಬ ಹಿರಿಯ
ಸತ್ತಾ ಅಂದರೆ
ಗೊಳೋ ಅತ್ತು
ಊರೆಲ್ಲ ನೆರೆಸಿ, ಗಳ ಕಟ್ಟಿ
ಚಟ್ಟ ಹತ್ತಿಸಿ ಊರಾಚೆ
ಸಾಗಿಸಿ, ಮುಗಿಸಿ ಎಲ್ಲ ಕೆಲಸ
ಉಸ್ಸೋ ಅಂತ ಸಮಾಧಾನಿಸಿಕೊಂಡು
ವಾಪಸು ಬಂದು ಮನೆ
ಮಂದಿಯೆಲ್ಲ ಬಿಸಿ ಬಿಸಿ
ದೋಸೆ ತಿನ್ನಬೇಕಂತೆ

ನನ್ನಜ್ಜ ಸತ್ತಾಗ ಕಣ್ಣು ಹನಿ
ಗೂಡುವ ಮೊದಲೆ ಈ ಸುಡುಗಾಡು
ಕತೆ ನೆನಪಾಗಿ
ಕಸಿವಿಸಿಯಾದ ಬಿಸಿ ಈಗಲೂ
ಇದೆ ಯಾಕೋ

ಗೊತ್ತಿಲ್ಲ.

ಸರ್ವಾಧಿಕಾರಿಗೆ ಅನಿಸಿದ್ದು

ಕಾಂಬೋಡಿಯಾ ಅನ್ನುವ ದೇಶ
ಪೋಲ್ ಪಾಟ್ ಅನ್ನುವ ನಿರಂಕುಶ ಸಲಗ

ಅವನ ಹಿಂದೆ ಲಕ್ಷ ಕೋವಿಯ ಬಳಗ
ಮಾಡಿದ ಒಂದೇ ಕೆಲಸ
ಅಂದರೆ, ಎಂಜಾಯ್ ಮಾಡಿದ್ದು
ಯಾರೋ ಕೂಡಿಟ್ಟದ್ದು
ಮಾಡಿಟ್ಟದ್ದು,
ಕುಡಿದದ್ದು ರಕ್ತ, ನೆಕ್ಕಿದ್ದು
ಬೆವರು, ಕಾಲೂರಿ ನಡೆದದ್ದು ಎದೆ ಮೇಲೆ

ಗುಂಡು ಹಾರಿಸಲು ಇಟ್ಟ ಟಾರ್ಗೆಟ್ಟು ಎಂದರೆ
ತಲೆಬುರುಡೆ ಕಣ್ಣಿನ ಗುಳಿ
ಚಪ್ಪರಿಸಿದ್ದು ಹಂದಿಮಾಂಸದ ಜೊತೆ ಮಕ್ಕಳ
ಲಿವರಿನ ಸೂಪು

ಅವನು ಕೈ ಎತ್ತಿದರೆ ಲಕ್ಷ ಕೈ
ಉರುಳುತ್ತಿತ್ತು
ಅವನು "ಫೈರ್" ಅಂದರೆ ದೇಶ
ತುಂಬ ಹೊಗೆ

ಹೀಗಿರಲಾಗಿ ಒಂದು ದಿನ ಆ ಲಕ್ಷದಲ್ಲಿ ಇಬ್ಬರು
ಎಳೆಮೀಸೆಗಳು
ಬಂದು ಎದುರು ಎದೆ ಸೆಟೆದು
ನಿಂತು ಕೋವಿ
ಕೈಬಿಟ್ಟು ತಣ್ಣಗೆ ಹೇಳಿದರು:
"ನಾವಿನ್ನು ಟ್ರಿಗರ್ ಒತ್ತೋದಿಲ್ಲ
ಅಂದರೆ ಒತ್ತೋದಿಲ್ಲ"

ಏನಾಯ್ತು ಅಂತೀರ?

ಮರುದಿನ ಸೂರ್ಯ ಕಾಣೋ ಮೊದಲೆ
ಆ ದೇಶ, ಈ ಜಗತ್ತಿಗೆ ಗುರುತು
ಸಿಗದ ಹಾಗೆ, ಅಣು - ರೇಣು - ತೃಣ - ಕಾಷ್ಟಕ್ಕೆ ಸೇರಿ
ಹೋದ ಹಾಗೆ, ಲಕ್ಷ ಕೋವಿಗಳ ಕಣ್ಣಿಗೆ ಬೀಳದ ಹಾಗೆ, ಇನ್ನಿಲ್ಲದ

ಹಾಗೆ, ಪರಾರಿ
ಪೋಲ್ ಪಾಟ್.

ಊರ್ಧ್ವಮೂಲ

ರಣಪೀಡೆ ಅಂತಾರಂತೆ ಈ ಕಡೆ
ಜನ - ಉದ್ದ ಮೂಗಿನ ಸೊಟ್ಟ
ಮೂತಿ ಕೆದರಿದ ತಲೆ
ನೀರಿಲ್ಲದೆ ಸತ್ತವರ ಪಿಶಾಚಿ

ರಾತ್ರಿ ಬಲೆ ಬೀಸೋಣ ಅಂತ
ಹೋದವರು ಬೀಸಿದ
ಬಲೆಗೆ ಬಿದ್ದ ಮೀನಷ್ಟನ್ನು
ತಂದು ಹರಡಿ ಮರಳ ಮೇಲೆ
ಒರಗೋಣ ಅಂತ
ಬಿದ್ದರೆ

ಕಳ್ಳ ಕಳ್ಳ ಹೆಜ್ಜೆ ಇತ್ತು ಬಂದ ಪೀಡೆ
ತಲೆ ಬಳಿ ಕೂತು
ಮರಲೋಕ್ಕಿ ಎರಡಡಿ ಹೊಂಡ ತೋಡಿ
ತಲೆಯಿಟ್ಟು ನಿಧಿಯ
ಹಾಗೆ ಮರಳು ಮುಚ್ಚಿ ಸದ್ದಿಲ್ಲದೆ
ಪರಾರಿಯಾಗುತ್ತಂತೆ

ಇಂಥ ಒಂದು ಸಾವು
ಕಂಡ ದಿನ
ರಾತ್ರಿ ಕಂಡ ಕನಸಲ್ಲಿ ಅದೇ

ಭೂತ ಬಂದು ನನ್ನ
ತಲೆ ಹೂತು ಮಣ್ಣು
ಮುಚ್ಚಿ ಹೋದಾಗ, ಕೈಕಾಲು
ಸೊಂಟವೆದ್ದು

ಬುಡಮೇಲು ಅಶ್ವತ್ಥವಾಗಿ
ನಿಂತಂತಾಗಿ ದಿಗಿಲಾಗಿ ಧಿಗ್ಗನೆದ್ದು
ನೀರು ಕುಡಿದೆ.

ಯಶೋಧರ ಸ್ವಗತ



ಹಾ! -
ದರ ನಡೆದುಹೋಯಿತು ನನ್ನೆದುರಲ್ಲೆ
ಕಣ್ಣೆದುರಲ್ಲೆ, ಬಾಳೆದುರಲ್ಲೆ, ವರ್ಷಗಳ
ಖ್ಖಂಡ ದಾಂಪತ್ಯದೆದುರಲ್ಲೆ -

ಒರೆಗಳೆದ ಕತ್ತಿ
ಹಿರಿದೆತ್ತಿ ತರಿಯಲೆ ಮಾಳವಸಿರಿ
ತುರಿಸಿಕೊಳ್ಳಲೇ ಮಧ್ಯ ಮಜಘನ್ಯ ಬರಿಸಿಕೊಳ್ಳಲು
ಕತ್ತರಿಸಿ ಒಗೆಯಲೆ ಒಡ್ಡಿದ ತೊಡೆ?

ಬಗೆ ಬಗೆ ಬಗೆ
ದು ಬಿಡಲೆ ತಿರ್ಯಗ್ಯೋನಿಗಳ
ಭವ ಹೊಗಿಸಿದ ಗಂಟು
ಬಿದ್ದವನ ರಸಿಕೆಯ

ಮಥಿಸಿ ಬಿಡಲೆ?
ಹಾ! ಪರವಶವು ಎನಲೆ?



ನಿನ್ನೊಳಗು ಕಾಣೆ ಕನ್ನಡಿಯ ಹಾವೆ,
ಎತ್ತ ಕಣ್ಣು, ಎಷ್ಟು ಮುಖ?
ಎಷ್ಟು ದ್ವಾರದ ಹುತ್ತ, ಯಾವ ರಚನೆ,
ಯಾವ ಕಡೆ ಹೇಗೆ ಸುಖ?

ಬಾಗಿಲಿಲ್ಲದ ಕೋಟೆ ಒಳಗೆ ಬಾಗಿಲೆ ಎಲ್ಲ
ಏಳು ಮಾಳಿಗೆ ಕೆಳಗೆ ಬಚ್ಚಲ ಮನೆ
ಹೊಳೆವ ಚಿನ್ನದ ಕಿರೀಟದೊಳಗೆ ಬೆಳ್ಳಿಯ ಸರಿಗೆ
ಸುಳ್ಳು ಬಸಿರಿನ ಕಳ್ಳ ಹಸಿಕಾಮನೆ

ಕಿಸುರುಗಣ್ಣಿನ ಡೊಂಕುಬಸಿರು ಒದ್ದರೆ ಮರ್ಮ
ಹುಸಿನಗುವ ಕಿಸಬಾಯಿ ಊರು
ಒರಲೆ ಹೂ ಬಿಟ್ಟ ದೊಗರು ಬೊಡ್ಡೆಯ ಕೆಳಗೆ
ಅಲೆಮಾರಿ ಕಾಡುಬೇರು

ಹುಟ್ಟು ನಿಂತರೆ ಮುಳುಗೆ? ಮುಳುಗಿದರೆ ಹುಟ್ಟು
ಪರದೆ ಬಿದ್ದರೆ ಅಂಕ ಕೊನೆ, ಮೊದಲು
ನೇಪಥ್ಯ ಕಂಡೀತು ಪರದೆ ಎದ್ದರೆ, ಇಣುಕಿದರೆ
ರಾವಣ ಸೀರೆಯುಡಿಸಿದ ಸಾಧ್ವಿ ಸೀತೆ

ನಿಂತರೆ ನಿಂತಂತೆ ಸೀತೆ ಪೊರೆಕಳಚಿ
ಕೊರಡು : ಉರಿದೇನು, ಚಿಗುರಿಯೇನೆ?
ತಬ್ಬಲಿಗು ಬೇಕೆ ಬಲಿ ಬೇರೆ? ಕೇಳುತ್ತಿವೆ -
ವಜ್ರದೊರೆ, ಮೊಂಡುಗತ್ತಿ.

Thursday, May 27, 2010

ಹೆಜ್ಜೆ ಗುರುತು

ಒಮ್ಮೆ ಒಬ್ಬ ರಾಜ, ಅವನ ಮಗ
ಹೋಗುತ್ತ ಇದ್ದಾಗ, ಜೊತೆ
ಎರಡು ಹೆಜ್ಜೆಗುರುತು ಎದುರು
ಸಿಕ್ಕಿತು

ರಾಜನಿಗೆ ಕರತಲಾಮಲಕ
ಅರುವತ್ತನಾಲ್ಕು ಕಲೆ. ಹೇಳಿದ,
"ಈ ಎಡಗಡೇದು ಸುಂದರ
ತರುಣಿಯದು. ಬಲಗಡೇದು ಅವಳಮ್ಮನದು.
ನೀನು ಅದಕ್ಕೆ ನಡಿ. ಬಲದಲ್ಲಿ ನಾನು.
ವಶ ಮಾಡಿಕೊಳ್ಳೋಣ ಅವರನು"

ಹೀಗೆ ನಡೀತಾ ಇದ್ದರು, ನಡೀತಾ ಇರುವ ಹಾಗೆ
ನಾವು, ಕೊನೆ ಮುಟ್ಟೋ ಹೊತ್ತಿಗೆ
ಸಿಕ್ಕಿದಳು ಸುಂದರ ತರುಣಿ
ಬಲಕ್ಕೆ, ಅವಳಮ್ಮ - ಎಡಗಡೆ

ವಿನಯ ಗುಣ ಸಂಪನ್ನ ಮಗ,
ಪಾಲಿಗೆ ಬಂದದ್ದೆ ಪಂಚಾಮೃತ ಅಂತ
ತಿಳಿದ, ಹುಸಿನಕ್ಕ ರಾಜ

ಈಗ ಹೇಳು ರಾಜ
ವಿಕ್ರಮ, ಆ ತರುಣಿಗೆ ರಾಜ
ಯಾರು? ರಾಜನಿಗೆ ಮಗ ಯಾರು?
ಹೊತ್ತೊಯ್ದು ಬಂದೆಯಲ್ಲ ಇಲ್ಲಿಯವರೆಗೆ
ಹೆಜ್ಜೆ ಊರಲೂ ಬಿಡದ ಹಾಗೆ
ನನಗೆ, ನೀನು ಯಾರು?

ರಾಣಿ

ಕೆಂಚು - ಬಿಳಿ - ಕಪ್ಪು ತುಪ್ಪಳ
ದಂಥ ರೇಶಿಮೆ ಮೈ
ಮಾಟದ ಚೆಲುವೆ - "ರಾಣಿ",
ಮೈಯಿಡೀ ನಿದ್ದೆ ಹೊದ್ದು ಮಲಗಿದರೆ
ಅಪ್ಪಟ ಮಗು

ಎದ್ದರೆ ಸುಡುವ ಹಸಿವು,
ಕಾಸಿದ ಹಾಲಿಟ್ಟರೆ ಲಚಪಚ
ಮುಕ್ಕಿ ತುಟಿ ನೆಕ್ಕಿ ಸವರುತ್ತ
ಬಾಗಿಲಿಳಿದರೆ ತುಂಬು
ಮೇನಕೆ

ರೋಡಲ್ಲಿ ತೊರಡಿಗೆ ಬಾಲ ವರ್ತುಳ ಸುತ್ತಿ
ಧ್ಯಾನಸ್ಥ ಕುಳಿತ ಮಾರ್ಜಾಲ
ರಾಯರಿಗೆಲ್ಲ ಪುಳಕ - ಇವಳ
ಕ್ಯಾಟ್ ವಾಕ್ ಕಂಡರೆ;
ಚಮಕಿತ - ಇವಲೆಲ್ಲೋ ಆಕಾಶ ಮೂಸುತ್ತ
ನಿಂದರೆ.

ಈ ಕಾಮಿ ಕಂಡೆಬ್ಬಿಸಿದ ಕಿಚ್ಚಿಗೆ
ಬಲಿಯಾಗಿ ಧ್ಯಾನಗೆಟ್ಟ ವಿಶ್ವಾಮಿತ್ರ
ರೊಳಗೇ ಅಂತರ್ಯುದ್ಧ.
ಮೈ ಪರಚಿಕೊಂಡು ಗೆದ್ದ
ಒಂದೆರಕ್ಕಷ್ಟೇ ಇವಳ ಗರ್ಭದಲ್ಲಿ
ಮಲಗಿ ಮರಿಯಾಗಿ
ಹುಟ್ಟಿ ಕಣ್ಮುಚ್ಚಿ ಮೊಲೆ ತಿನ್ನುವ ಭಾಗ್ಯ

*****

ನೂರಾರು ಬಣ್ಣದಲ್ಲಿ ಅದ್ದಿ
ತೆಗೆದ ಬ್ರಶ್ಶು ಬೇಕಾಬಿಟ್ಟಿ
ಆಡಿಸಿ ಬರೆದ ಬಿಳೀ ಕ್ಯಾನ್ವಸ್ಸಿನ
ಚಿತ್ರ - ಇವಳ ಸಂತಾನ;
ಮತ್ತದರ ಚೌಕಟ್ಟು
ಇವಳು.