Tuesday, September 7, 2010

ಲೆಕ್ಕದ ಮೇಸ್ಟ್ರ ಗಳುಗಳು

ಕೋಣೆಯ ನಾಕು ಗೋಡೆಗಳು
ಕೂರಲು ಮಲಗಲು ಬೆಂಚುಗಳು
ಒಂಭತ್ತಡಿಯ ಸೀರೆಯ ಹಾಗೆ
ಸಪಾಟ ಮಲಗಿದ ಬೋರ್ಡುಗಳು 


ಉತ್ತರವಿಲ್ಲದ ಪ್ರಶ್ನೆಗಳು
ನೂರಾ ಎಂಟು ಸೂತ್ರಗಳು
ಎಕ್ಸ್ ವಾಯ್ ಜಡ್ದೂ ಬೆಲೆಗಳು
ಕೆರೆಯುತ್ತ ಕೂತ ತಲೆಗಳು 


ಕ್ವಿಂಟಾಲ್ ಗಟ್ಟಲೆ ಬುಕ್ಕುಗಳು
ಬಿಡಿಸಲು ಬಾರದ ಸಿಕ್ಕುಗಳು
ಸೈನೂ ಕಾಸೂ ಟ್ಯಾನುಗಳು
ಗೊರಗೊರ ತಿರುಗುವ ಫ್ಯಾನುಗಳು 


ಆಯ್ಲರ್ ಮಾಡಿದ ಪಾಪಗಳು
ನ್ಯೂಟನ್ನಿಗೆ ಹಿಡಿ ಶಾಪಗಳು
ಉತ್ತರವೆಂಬುದು ಕೈಗಳಿಗೆಟುಕದ,
ಎಲ್ಲೋ ಮಿಣುಕುವ ದೀಪಗಳು


ಕಂಪಾಸ್ ಬಾಕ್ಸಿನ ಅಸ್ತ್ರಗಳು
ಪ್ರಮೇಯ, ಸಾಧನೆ, ಚಿತ್ರಗಳು
ಯುದ್ಧಭೂಮಿಯಲಿ ಒಟ್ಟಿದ ಶವಗಳ
ಮೇಲೆ ಎಳೆದ ಬಿಳಿ ವಸ್ತ್ರಗಳು


ಉತ್ತರ ಪತ್ರಿಕೆ ಗಂಟುಗಳು
ಶ್ರಾದ್ಧದ ಧರ್ಬೆ ದಂಟುಗಳು
ಕೂಡಿಸಿ ಕೂಡಿಸಿ ಕೊಟ್ಟರೂ ಸಿಗುವುದು 
ಆರೋ ಏಳೋ ಎಂಟುಗಳು


ಆಲ್ಫಾ ತೀಟ ಪೈಗಳು 
ಬರೆಬರೆದು ಸತ್ತ ಕೈಗಳು
ನಡು ಬಗ್ಗಿದ ಯುವ ಮೈಗಳು
ವಾಚಾಮಗೋಚರ ಬೈಗಳು


ನಿಂತೇ ಹೋದ ವಾಚುಗಳು
ಮಳೆಯಲ್ಲಿ ನೆನೆದ ಮ್ಯಾಚುಗಳು
ಹಿಡಿತಕ್ಕೆ ಸಿಗದ ಕ್ಯಾಚುಗಳು
ತಲೆ ತುಂಬ ಎಳೆದ ಗೀಚುಗಳು.....



Wednesday, August 18, 2010

ಲೈಫು ಇಷ್ಟೇನೆ!

ಬೆಳಗ್ಗೆ ಎದ್ದರೆ ಟ್ಯೂಶನ್ ಪಾಠ
ಕಾಲೇಜ್ ನಲ್ಲಿ ಪ್ರೊಫೆಸರ್ ಕಾಟ
ಸಂಜೆಗೆ ಬೀಟಿಯೇಸ್ಸಲಿ ಓಟ ------ಲೈಫು ಇಷ್ಟೇನೆ!

ಫೇಸ್ ಬುಕ್ಕಲ್ಲಿ ಗೆಳೆಯರ ಸರ್ಚು
ಚಾಟಿಂಗ್ ನಲ್ಲಿ ಬಡಾಯಿ ಕೊಚ್ಚು
ಹುಡುಗೀರ್ ಜೊತೆಗೆ ಹೋಟೆಲ್ ಖರ್ಚು-----ಲೈಫು ಇಷ್ಟೇನೆ!

ಕಂಪಾಸ್ ಬಾಕ್ಸಲಿ 'ಆಕೆ'ಯ ಫೋಟೋ
ಟೆಕ್ಸ್ಟ್ ಬುಕ್ಕೊಳಗೆ ಸಿನೆಮಾ ಚೀಟಿ
ಸ್ಟಡಿ ರೂಮಲ್ಲಿ ಸವಿತಾ ಬಾಬಿ----------ಲೈಫು ಇಷ್ಟೇನೆ!

ಎಕ್ಸಾಮ್ ಹಾಲಲಿ ಪಕ್ಕದ ಹುಡುಗೀ
ಒಂದೇ ನಗುವಿಗೆ ವಿಕೆಟ್ಟು ಉರುಳಿ
ಪೇಪರ್ ನಲ್ಲಿ ತರ್ಪಣ ಬಿಟ್ಟೆ -----------ಲೈಫು ಇಷ್ಟೇನೆ!

ಅಪ್ಪನ ದುಡ್ಡು ಕರಗೇ ಹೋಯ್ತು
ಅಮ್ಮನ ಮಾತು ಮರೆತೇ ಹೋಯ್ತು
ಸಿಗರೇಟ್ ಹೊಗೆಯ ಸುರುಳಿಯ ಹಾಗೆ ------ಲೈಫು ಇಷ್ಟೇನೆ!

Friday, July 9, 2010

ನಾಂದಿ ಪದ್ಯ (ಬೆನಕನ ಸ್ತುತಿ)

ಕಂಡೀರೇನೆ ಎಂಥಾ ಮಗನ ಪಡೆದಳೆಂದು ಪಾರ್ವತಿ!
ಇಂಥ ಮಗನ ಕೂರಿಸಿಟ್ಟು ಎತ್ತಿರೆಲ್ಲ ಆರತಿ.

ನರಮಾನವ ಹೊಟ್ಟೆ ಮೇಲೆ ಆನೆ ತಲೆಯು ಕೂತಿದೆ
ಬೀಸಲೆರಡು ಅತ್ತ ಇತ್ತ ಕಿವಿಯು ಮೊರದ ಹಾಗಿದೆ

ದೊಡ್ಡ ಹಣೆಯ ಆಚೆ-ಈಚೆ ಪುಟ್ಟ ಕಣ್ಣು ಪಿಳಿಪಿಳಿ
ಡೊಳ್ಳು ಹೊಟ್ಟೆ ಬಿರಿಯದಂತೆ ಹಾವು ಬಿಗಿದ ಸರಪಳಿ

ಇನ್ನೂ ಬೇಕು, ಇನ್ನೂ ಬೇಕು ಎನುವ ಹೊಟ್ಟೆಬಾಕಾ
ಅಗಿದು ತಿನಲು ಮಾತ್ರ ನಿನಗೆ ಒಂದೇ ದಂತ ಸಾಕ?

ನೀನು ಹೊರಟು ನಿಂತರೆ ಸುತ್ತಿಬರಲು ಮೂಲೋಕ
ಜೀವಭಯದಿ ನಡುಗುತಾನೆ ನಿನ್ನ ಗೆಳೆಯ ಮೂಷಿಕ!

ಕಾದಿರುವರು ನಿನಗಾಗಿಯೇ ಎರಡು ಹೆಣ್ಣು, ಒಡೆಯನೆ
ಹೇಗವರಿಗೆ ಸೊಂಡಿಲಲ್ಲಿ ಮುತ್ತನಿಡುವೆ ಮಡೆಯನೆ!

ಬೇಡಿದವರ ಇಷ್ಟದಂತೆ ನಡೆವೆಯಂತೆ ಹೇರಂಭ!
ನಿನ್ನ ಹೊಗಳುಸೇವೆಯಿಂದ ನಮ್ಮಾಟದ ಆರಂಭ

ಹೇರಂಭಾ, ಏಕದಂತ, ಗೌರೀಸುತ, ಬೆನಕಾ
ನಮ್ಮ ತಪ್ಪು ನುಂಗಿಕೊಂಡು ಕಾಯೋ ಕೊನೆ ತನಕ

ನಿನಗು, ನಿನ್ನ ಹಡೆದವರಿಗು ಮಾಡುತ್ತೀವಿ ನಮನ
ಇರಲಿ ನಮ್ಮಾಟದಲ್ಲಿ ನಿನ್ನ ಪ್ರೀತಿ, ಗಮನ!

(ನನ್ನ ಹೊಸ ನಾಟಕ "ಚಮತ್ಕಾರ"ದ ನಾಂದಿ ಪದ್ಯ)

ಕೆಂಕಪಿಯ ಹಾಡು

ನಾನೇ ರಾಜಕುಮಾರ
ಕಪಿಗಳ ಸರದಾರ
ಅಂಥಾ ಅಜ್ಜನ ಇಂಥಾ ಮೊಮ್ಮಗ,
ನನ್ನಯ ಮಹಿಮೆ ಅಪಾರ! :)

ಅಜ್ಜನ ಹಾಗೆ ನಾಗೂ ಜಿಗಿದೆ
ಕೆಂಪಿನ ಹಣ್ಣು ಹಿಡಿಯೋದಕ್ಕೆ
ಕಿಲಾಡಿ ಹಣ್ಣು ತಪ್ಪಿಸಿಕೊಂಡು,
ಊದಿತು ಮುಸುಡಿ, ಮುರಿಯಿತು ಪಕ್ಕೆ :(

ಅಜ್ಜನ ಹಾಗೆ ನಾನೂ ಹಾರಿದೆ
ಬಾಲಕೆ ಕಿಚ್ಚು ಹೊತ್ತಿಸಿಕೊಂಡು
ಉರಿಯಲಿ ಉರಿಯಲಿ ಎನ್ನುತ ಸುರಿಯಲು
ಚೆಲ್ಲಿತು ಎಣ್ಣೆ, ಉರಿಯಿತು ಅಂಡು :(

ಅಜ್ಜನ ಹಾಗೆ ತಡಕಾಡಿದೆನು
ಮಹೆಂದ್ರಗಿರಿಯಲಿ ಸಂಜೀವನಿಗೆ
ಗಿರಿ ಹೊರಲಾರದೆ, ಗಿಡವೂ ಸಿಕ್ಕದೆ
ಕೊನೆಗೋಡಿದೆನು ವೈದ್ಯರ ಮನೆಗೆ :(

ಅಜ್ಜನ ಹಾಗೆ ಹುಡುಕಿದೆ ನಾನೂ
ನನಗೂ ತೋಟದಿ ಸಿಕ್ಕಿದಳು
ಇವಳೇ ಇರಬಹುದೆನ್ನುತ ಉಂಗುರ
ತೋರಲು ಹೋದರೆ ಇಕ್ಕಿದಳು :(

ನಾನೇ ರಾಜಕುಮಾರ
ಪರಾಕ್ರಮದ ಅವತಾರ,
ಯಾರಿದ್ದಾನೆ ನನಗೆ ಎದುರು ನಿಲ್ಲೋ ಧೀರ? :)

(ನನ್ನ "ಮೃಗ ಚೆಲುವೆ" ನಾಟಕದ ಹಾಡು)

ವಿಧಿಯ ಹಾಡು

ಹುಟ್ಟಿದ ಮೂರು ಗಳಿಗೆಯಲಿ
ಬರುತ್ತಾನೆ ತುಂಟ
ಬಡವನಿಗೆಂತೋ ಹಾಗೇನೆ
ಧನಿಕನಿಗೂ ಅವ ನೆಂಟ

ಭವಿಷ್ಯ ಎಂಬುದು ಬಳಪದ ಕಡ್ಡಿ
ಹಣೆ ಅವನ ಸ್ಲೇಟು
ಗೀಚುವನಲ್ಲಿ ಅಡ್ಡಾದಿಡ್ಡಿ
ಅಕ್ಷರ, ಚಿತ್ರ, ಗೀಟು

ಬಡವನ ನಾಲಿಗೆಗೂ ತಾಗಿಸುವನು
ಕೆಲವೊಮ್ಮೆ ಹನಿಜೇನು
ಧನಿಕನ ಮೀಸೆಗು ಮಣ್ಣು ಮೆತ್ತುವನು
ನೆಟ್ಟಗಾಗಿಸುವ ಗೂನು

ಹರಿಶ್ಚಂದ್ರನಿಗೆ ಮಸಣ
ಶಕುಂತಲೆಗೆ ವಿರಹ
ಸೀತೆಗೆ ಕಾಡು - ಎಲ್ಲಕು ಕಾರಣ
ಅವನು ಬರೆದ ಹಣೆಬರಹ.

(ನನ್ನ "ಮೃಗ ಚೆಲುವೆ" ನಾಟಕದ ಹಾಡು)

Thursday, July 1, 2010

ನೆನಪಿನ ಮಳೆ

ಭೋರೆಂದು ಘೀಳಿಡುವ ಮಳೆಯಲ್ಲಿ ಬಂದವರ
ನೆನೆದ ಅಂಗಿಗಳಲ್ಲಿ ಅವನ ನೆನಪು
ಅವರಿಳಿಸಿ ಮುಚ್ಚಿಟ್ಟ ಕಡುಕಪ್ಪು ಕೊಡೆಯಲ್ಲಿ
ಇಳಿವ ಹನಿ ಹನಿಯಲ್ಲಿ ಅವನ ನೆನಪು

ಉಪಚಾರ ಮಾತಿನಲಿ, ಕೈ ಕುಲುಕು, ನೋಟದಲಿ,
ಬಿಸಿ ಕಾಫಿ ಕಪ್ಪಿನಲಿ ಅವನೇ
ಉಟ್ಟ ಜರಿಸೀರೆಯಲಿ ಹೊಳೆವ ಬಣ್ಣಗಳಲ್ಲಿ
ಬಿಡಿಸಿಟ್ಟ ಚಿತ್ತಾರ ಅವನೇ

ಅವರು ಕೇಳಿದರೆಂದು "ಯಾವ ಮೋಹನ ಮುರಳಿ
ಕರೆಯಿತೋ"ಎಂದಾಗ ಬಂದ
ಇಟ್ಟ ವೀಣೆಯ ಮೇಲೆ ನಡುಗು ಬೆರಳುಗಳಿಂದ
ತಂತಿ ಮೀಟಲು ಹಾಡು ತಂದ

ಹೂವು ಹಣ್ಣಿನ ರಾಶಿ, ಪೂಜೆ, ಆರತಿ, ಬೆಳಕು,
ಗಂಧ - ಅಕ್ಷತೆಯಲ್ಲಿ ಅವನು
ಅವರಿವರ ಮಾತು ನಗೆ ಚಪ್ಪಾಳೆ ಸದ್ದಿನಲಿ
ಕಳೆದು ಹೊದಾನೇನೋ ಅವನು

ಸಿಕ್ಕಾದ ಮೊಲ್ಲೆ ಜಡೆ, ಬಿಚ್ಚಿಟ್ಟ ಸೀರೆ,ಸರ
ಉಂಗುರದ ಬೆರಳಲ್ಲಿ ಅವನ ನೆನಪು
ತಿಂಗಳಾಗಲು ತುಂಬಿ ತೊಳೆದುಹೋಗುವ ಬಸಿರು
ಬಚ್ಚಿಟ್ಟ ಉಸಿರಿನಲಿ ಅವನ ನೆನಪು..

Tuesday, June 22, 2010

ಒಂದು ಗಳಿಗೆಯ ಆ ಸುಖ

ನಿಮಗೆ ಗೊತ್ತಿದೆಯೋ ಕಾಣೆ - ಈ ಬೀಡಾಡಿ
"ವಿಡೋ ಜೇಡ" ಕತೆ
ಸುರತ ಸುಖ ಸುಖ ಅನ್ನುವ
ರಸಿಕರೆಲ್ಲ ಕೇಳಿ ಈ ವ್ಯಥೆ

ಪಚ್ಚೆ ಕಾಡಿನ ದಟ್ಟ ಹಸಿರಿನ
ಗಿಡಗಂಟಿಗಳ ನಡುವೆ
ಬೆದೆ ಬಂದು ಕೂತ ಕನ್ನೆಯ
ಸುತ್ತ ಉಚ್ಚಿಷ್ಟದೊಡವೆ

ಅವಳ ಅಂಗಾಂಗ ಮಾಟ, ಚೆಲುವಿನ
ರೂಪ, ಕಾಮಾಸಕ್ತ ಭಂಗಿ
ಕಂಡು ಕೆರಳಿದ ಗಂಡು ಊರ್ಣನಾಭರ
ಮನಸೆಲ್ಲ ಪಂಚರಂಗಿ

ಈ ಹೆಣ್ಣ ಬಯಕೆಯ ಗರ್ಭ
ಗುಡಿಯಲ್ಲಿ ಧ್ವಜ ನೆಡಲು ಸಿದ್ಧ
ರಾಗಿ ನಿಂತ ಗಂಡೆಲ್ಲ ಮುಗಿಬಿದ್ದು
ಮಾಡುವವು ತಮ್ಮೊಳಗೆ ಯುದ್ಧ

ಗೆದ್ದ ವೀರಾಧಿವೀರ ಹಾರಿ ಬಂದೊತ್ತಿ
ಇವಳ ಅಂಡಕ್ಕೆ ಮುದ್ರೆ
ಎದ್ದೋಡುವ ಮೊದಲೆ ಹಿಡಿವಳು ಗಬಕ್ಕನೆ
ಕತ್ತ, ಈ ಕಾಳಿ - ಭದ್ರೆ!

ಮೈಯಲ್ಲಿ ಇಳಿಯದ ಬಿಸಿ, ಹಸಿವಿನ ಹಸಿ
ನೆನಪು, ಪ್ರೆಮದಭಿಷೇಕ
ಎಲ್ಲ ಇನ್ನೂ ಇದ್ದ ಹಾಗೆಯೆ ಅವನು ಹೆಣ
ಯಾರಿಗಿದೆ ಯಾವ ಶೋಕ!

ಕೊಂದ ಮಿಂಡನ ಮೇಲೆ ಇಟ್ಟ
ಪ್ರೀತಿಯ ತತ್ತಿ ಒಡೆದು
ಹೊರಬಂದ ಸಾವಿರ ಮರಿಗಳೆಲ್ಲ
ಅಪ್ಪನ ರಕ್ತ ಕುಡಿದು

ಕೊಬ್ಬುತ್ತಾವೆ, ಬೆದೆ ಬಂದು ಸಾಯುತ್ತಾವೆ
ಮುಂದೊಮ್ಮೆ ಹೆಣ್ಣುಗಳಿಗೆ
ಯಾಕಿಂಥ ಜನ್ಮ ಅಂತ ಅನಿಸೋದಿಲ್ಲ
ವಲ್ಲ ಈ ಗಂಡುಗಳಿಗೆ,
ಒಂದು ಗಳಿಗೆ!