Saturday, June 30, 2012

ಒಮ್ಮೆ ನೋಡು ಇತ್ತ

ಬರೆಯಲು ಬಾರದು, ಬರೆಯಲೂ ಬಾರದು ನೋಡಿ
ಒಂದಕ್ಷರ ಕೂಡ ಇಂಥ ಗಳಿಗೆ
ಇಳಿದಿಳಿದು ಲಾವದ ಹಾಗೆ ಹೆಪ್ಪುಗಟ್ಟಿದ ನೋವು
ತಣ್ಣಗೆ ಕೊರೆವಾಗ ಒಳಗೆ

ಮಾತು ಬಲಹೀನ, ಮೌನ -  ಹಬ್ಬುತ್ತಿದೆ
ಏನು ಮಾಡಲಿ ಆರ್ತಜೀವ
ಬೆಂಕಿನಾಲಗೆ ಚಾಚಿ ಸುಡುವ ಪ್ರೇಮದ ಕಾವು,
ಒಳಗೆಲ್ಲ ಶೂನ್ಯಭಾವ.

ನನ್ನ ಪದಗಳಿಗಿಲ್ಲಿ ಯಾವ ಬೆಲೆ, ಏನು ನೆಲೆ,
ಭಗ್ನ ಪಂಜರದ ಮೂಕಪಕ್ಷಿ
ಉಸುಕಿನರಮನೆ ಮೇಲೆ ಅಲೆಗಳೆಬ್ಬಿಸಿ ಹೋದ
ರುದ್ರ ಸಾಗರವೊಂದೆ ಸಾಕ್ಷಿ

ಕತೆ,ಕವಿತೆ,ಲಾವಣಿಗೆ ಸಿಕ್ಕುವಂಥಹುದಲ್ಲ
ಗಾಳದೆರೆಹುಳು ; ಸುತ್ತ ನೀರು
ಹಬ್ಬಿ ಹರಡಿದ ದುಃಖವನ್ನು ತಲೆಯಲಿ ಹೊತ್ತು
ಕೆಸರಲುಬ್ಬಸ ಪಡುವ ಬೇರು

ಎಳೆದ ಹಗ್ಗದ ಗುರುತು, ಇಳಿವ ನೆತ್ತರ ಮರೆತು
ಓಡುವಂತಿದೆ ಎಳಸು ಕಾಲು
ಅಪ್ಪಿ ಹಿಡಿದರೆ ಸಾಕು, ಉಬ್ಬಿ ಬರುವುದು ಕೊರಳು
ಊಡದಿರು ಮಾತ್ರ ವಿಷಹಾಲು

ಕಣ್ಣ ತೊಟ್ಟಿಂದ ತೊಟ್ಟಾಗಿ ಇಳಿದಿದೆ ನೀರು
ಸುಡುವ ಕೆನ್ನೆಯನೊಮ್ಮೆ ಒರೆಸು
ಗರಿ ಸುಟ್ಟ ಗುಬ್ಬಚ್ಚಿಯಂತೆ ಬೇಡುವೆ ನಿನ್ನ
ಯಾಕಿನ್ನೂ ಕಲ್ಲು ಮನಸು?