Tuesday, December 12, 2023

ನೆಲೆ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಹಾರುವ ಹಕ್ಕಿಯು ಕೂಡ
ಮೊಟ್ಟೆಯನಿಟ್ಟು ಸಂತತಿ ಬೆಳೆಸಲು
ಕಟ್ಟುವುದಿಲ್ಲವೆ ಗೂಡ?

ವೃಕ್ಷದ ಮೇಲ್ಕೆಳಗಾಡುವ ಅಳಿಲಿಗೆ
ಬೆಚ್ಚನೆ ಪೊಟರೆಯ ರಕ್ಷೆ
ವಿಶ್ವದ ಅಂಗಳ ತಮ್ಮದೆ ಆದರೂ
ಗ್ರಹಗಳು ಬಿಡುವವೆ ಕಕ್ಷೆ?

ಭಾಷೆಗೆ ನಾಲಗೆ, ಭಾವಕೆ ಹೃದಯ,
ಸ್ವರಕ್ಕೆ ತಂತಿಯೆ ಮನೆ
ತಾರೆಗಳೆಷ್ಟೋ ಅಷ್ಟೂ ಮನೆಗಳೇ,
ಅಣುವಿಗೆ ಸೂಜಿಯ ಮೊನೆ

ವಿರಾಗಮೂರ್ತಿಗೆ ಬಯಲೇ ಆಲಯ,
ಇಪ್ಪತ್ತೇಳು ಮನೆ ಚಂದ್ರನಿಗೆ,
ಪರ್ಣಕುಟೀರ ಋಷಿಮುನಿಗಳಿಗೆ,
ಸ್ವರ್ಗದ ಅರಮನೆ ಇಂದ್ರನಿಗೆ

ವನರಾಜನ ಮನೆ ಗುಹೆಯೊಳಗೆ,
ಹಾವಿಗೆ ಮೃಣ್ಮಯ ಹುತ್ತ
ಕಡಲಿಗೆ ಹೊರಟರೂ ಸಾಲ್ಮನ್ ಮೀನಿಗೆ
ಹುಟ್ಟಿದ ತೊರೆಯಲೆ ಚಿತ್ತ

ಮುಗಿಲಿಗೆ ಚಾಚಿದ ಹಣ್ಣೆಲೆ ಬಿದ್ದರೆ
ಬೇರಿಗೇ ಬರಬೇಕು
ಎಲ್ಲೆಡೆ ಓಡುವ ರೈಲನ್ನು
ನಿಲ್ದಾಣಕೇ ತರಬೇಕು

ಕುಟುಂಬವತ್ಸಲ - ಜಗದೊಡೆಯ
ಎಂಬೆರಡು ಹೊಣೆಯ ಮಧ್ಯೆ
ತೋಲನ ತೂಗುವ ಪುರುಷೋತ್ತಮನಿಗು
ಇಹ ನೆಲೆ: ಅಯೋಧ್ಯೆ.