Thursday, August 22, 2019

ಪ್ರತಿಮೆ

ಸಾವರಕರ ಪ್ರತಿಮೆಗೆ ಮಸಿ ಬಳೆದನಂತೆ
ಯೂನಿವರ್ಸಿಟಿಯ ಒಬ್ಬ ಬುದ್ಧಿಜೀವಿ
ಓದಿದರೆ ನಗು ಬರಲಿಲ್ಲ, ಅಳು ಬರಲಿಲ್ಲ,
ಆವರಿಸಿದ್ದು ಗಾಢ ವಿಷಾದ ಕೂಡ ಹೌದೋ ಅಲ್ಲವೋ ಗೊತ್ತಿಲ್ಲ,
ತುಂಬಿಕೊಂಡದ್ದೊಂದು ಖಾಲಿತನ ಅಷ್ಟೆ.

ಅನ್ನಿಸಿತು
ಪ್ರತಿಮೆಗಳಿರುವುದೇ ಮಸಿ ಬಳೆಸಿಕೊಳ್ಳಲಿಕ್ಕಲ್ಲವೆ,
ಕಾಗೆ ಗುಬ್ಬಚ್ಚಿಗಳ ಪಿಷ್ಟ, ಮಳೆ ಗಾಳಿ ಚಳಿ ಬಿಸಿಲಿನ ಕಷ್ಟ
ಅನುಭವಿಸಿ ಹದವಾಗಲೆಂದೇ ನಿಲ್ಲಿಸುತ್ತಾರೇನೋ
ಅನ್ನಿಸುತ್ತದೆ ದೇಶದಲ್ಲೆಡೆ ಪ್ರತಿಮೆಗಳ ಜಾತ್ರೆ ಕಂಡಾಗ.
ಸಾವರಕರರ ಪ್ರತಿಮೆ ನಿಲ್ಲಿಸದೇ ಇದ್ದಿದ್ದರೆ ಪಾಪ,
ಆ ಹುಡುಗ, ಆ ಶಾಯಿಯನ್ನು ಪರೀಕ್ಷೆ ಬರೆಯುವುದಕ್ಕಾದರೂ
ಬಳಸಿ ಉದ್ಧಾರವಾಗಬಹುದಿತ್ತು.

ಅದಕ್ಕೇ ಇರಬೇಕು ನಮ್ಮಲ್ಲಿ ವಸಿಷ್ಟ, ವಿಶ್ವಾಮಿತ್ರ,
ಭರದ್ವಾಜ, ಮತ್ತೊಂದಿಷ್ಟು ಗೋತ್ರ...
ಯಾರ ಪ್ರತಿಮೆಗಳೂ ಇಲ್ಲ. ನಿಲ್ಲಿಸಬೇಕು ಅಂತಲೂ
ಯಾರಿಗೂ ಅನಿಸಿಲ್ಲ, ಹೋಗಲಿ ವ್ಯಾಸ
ವಾಲ್ಮೀಕಿ ಕಾಳಿದಾಸರ ಪ್ರತಿಮೆಯಾದರೂ
ನಿಲ್ಲಿಸಬಹುದಿತ್ತು. ಅಥವಾ ವೃದ್ಧರೆಂದು ಕನಿಕರಿಸಿ
ಕೂರಿಸಬಹುದಿತ್ತು, ಅದನ್ನೂ ನಮ್ಮ ಜನ
ಮಾಡಲಿಲ್ಲ, ಬುದ್ಧಿವಂತರು!

ಅಥವಾ ಕಮ್ಯುನಿಸ್ಟ ರಾಷ್ಟ್ರಗಳವರಂತೆ ಲೆನಿನ, ಸ್ಟಾಲಿನ, ಮಾವೋ ಜೆಡಾಂಗರ
ಆಕಾಶದೆತ್ತರ ಪ್ರತಿಮೆ ನಿಲ್ಲಿಸಿದಂತೆ ಯಾರಿಗೂ ತಲೆ
ಕಾಣದಂತೆ ಒಂದೆರಡು ಸಾವಿರ ಅಡಿಗಳಷ್ಟುದ್ದ ಪ್ರತಿಮೆಗಳ ಕೆತ್ತಿ
ನಿಲ್ಲಿಸಿದ್ದರೆ ಮಸಿ ಬಳೆಯುವವರೂ ಯೋಚಿಸಬೇಕಿತ್ತು,
ಮಸಿ ಜೊತೆಗೆ ಏಣಿ ತರುವ ಶ್ರಮ ಬೇಡವೆಂದು
ಸುಮ್ಮನಾಗುತ್ತಿದ್ದರೇನೋ.

ಆದ್ದರಿಂದ ನಿಮ್ಮೆಲ್ಲರಲ್ಲಿ ಒಂದು ಬಿನ್ನಹ ಇಷ್ಟೆ:
ನಾನು ಸತ್ತರೆ ನನ್ನ ಪ್ರತಿಮೆ ಮಾಡಿ ನಿಲ್ಲಿಸಬೇಡಿ,
ಗೋರಿಗೊಂದು ಮಂಟಪ ಕಟ್ಟಿ ಹೂಮಾಲೆ ಹಾಕಿ
ಪೂಜಿಸಬೇಡಿ. ಯಾರೋ ಮುಂದಿನ ಶತಮಾನದಲ್ಲಿ
ನನ್ನ ಗುರುತಿಲ್ಲದ ಜನ ಶಾಯಿ ಎರಚಿ (ಅಥವಾ ಕೀಬೋರ್ಡಿನಿಂದ
ತಲೆ ಮೊಟಕಿ) ಚಪ್ಪಲಿ ಅಥವಾ ಶೂಗಳ ಹಾರ ಹಾಕಿ
ಗೌರವ ಸಮರ್ಪಿಸಲು ಅವಕಾಶ ಕೊಡಬೇಡಿ. ನಾನು, ಇನ್ನೂ ನೂರಾರು
ವರುಷ ಒಂದಷ್ಟು ಜನರಿಗೆ ಅಪಥ್ಯವಾಗಿ, ನೆರಳಾಗಿ, ಭೂತವಾಗಿ, ಹಿಡಿಯಲಿಕ್ಕೆ ಸಿಕ್ಕದ
ಪಿಶಾಚಿಯಾಗಿ ಕಾಡಬೇಕಿದೆ, ಅವಕಾಶ ಮಾಡಿಕೊಡಿ. ನನ್ನನ್ನು
ಯಾರ ಕೈಗೂ ಸಿಕ್ಕಿಸಬೇಡಿ, ದಮ್ಮಯ್ಯ. 

No comments:

Post a Comment