Tuesday, December 4, 2012

ಅಜ್ಜಿ ಹೋದ ದಿನ



ಕೊರಡುಗಳ ನಡುವೆ ಕೊರಡಾಗಿ 
ಮಲಗಿ, ಮುತ್ತಿಟ್ಟ 
ಬೆಂಕಿಗೆ ಚಿಟಚಿಟನೆ ನಗು 
ನಗುತ್ತ ಹೊಗೆಯಾಗಿ ಹಾರಿ ಹೋದರೆ 
ಮೇಲೆ?

ಇಲ್ಲಿಲ್ಲ, ಇರಲಿಕ್ಕಿಲ್ಲ, ಇಲ್ಲೇ 
ಇದ್ದಾರೆ - ಈ ಅಜ್ಜಿ, ನೆಲ 
ಕ್ಕಂಟಿ, ಬೇರಿಳಿಸಿ ಆಳ ಆಳಕ್ಕೆ ಹೂತು 
ಯಾರೂ ಎತ್ತಲಾರದಷ್ಟು ಹಟದಲ್ಲಿ ಕೂತು 
ಇರುತ್ತಾರೆ ಈ ನೆಲದಲ್ಲಿ -
ಅನಿಸುತ್ತದೆ 

ಅಜ್ಜಿ - ನೆಟ್ಟು ಬೆಳೆಸಿದ ಸಾಲು 
ಮರಗಳ ಎಲೆ ಎಲೆಯ ಲೆಕ್ಕ 
ಕೂಡ ತಿಳಿದವರು, ಆ ಹೂವು 
ಹಣ್ಣು, ಹೀಚುಕಾಯಿಗಳ ಜೊತೆ ಪಟ್ಟಾಂಗ 
ಹೊಡೆದವರು, ಅದರ ಮೇಲೆ ಕೂತ
ಹಕ್ಕಿಯ ಹಾಡು ಕೇಳುತ್ತ ಕಣ್ಣೀರು ಕರೆದವರು 
ಮರ - ಹಕ್ಕಿ - ಹೂವು - ಹುಲ್ಲಿನ ಸಹಸ್ರ 
ವಂಶ ಹಡೆದವರು 

ನಾವೆಲ್ಲಾ ನಮ್ಮ ರೆಕ್ಕೆ ಬಲಿಸಿ 
ಕೊಂಡು, ಬಾಯಿಗೆ ಹೊಸಹೊಸ ಭಾಷೆ 
ಕಲಿಸಿಕೊಂಡು, ಪರಂಗಿ ನೆಲಗಳನ್ನು ಒಲಿಸಿಕೊಂಡು 
ಹೋದರೂ ಯಾರಯಾರ 
ಅಂಗಿಗೋ ತೇಪೆ ಹೊಲಿಯುತ್ತ ,
ನಮ್ಮ ಘನಹುದ್ದೆಗಳ ಪೀಪಿ ಉಲಿಯುತ್ತ,
ಸೊಂಟದಡಿ ಕೊಬ್ಬಾಗಿ ಬಲಿಯುತ್ತ 
ಉಬ್ಬಸ ಬಂದು 
ಮಾತ್ರೆ ನುಂಗಿ ನೀರು ಕುಡಿಯುತ್ತೇವೆ 
ಮೇಲೊಂದಿಷ್ಟು ವ್ಯಾಯಾಮ - ಏರೋ 
ಬಿಕ್ಸು, ಉರುಳುತ್ತೇವೆ.

ಅವರೇ ಬೆಳೆಸಿದ ಮಾವು 
ಅವರ ಜೊತೆ ಸುತ್ತೂ ಮಲಗಿ 
ಅವರ ಜೊತೆಗೇ ಹೊಗೆ 
ಯಾಗಿ ಮೇಲೇರುತ್ತ ಗಾಳಿಗೆ 
ಬೆರೆತಾಗ ಉಮ್ಮ 
ಳಿಸಿ ಬಂತು ನೂರೊಂದು ನೆನಪು...

Saturday, June 30, 2012

ಒಮ್ಮೆ ನೋಡು ಇತ್ತ

ಬರೆಯಲು ಬಾರದು, ಬರೆಯಲೂ ಬಾರದು ನೋಡಿ
ಒಂದಕ್ಷರ ಕೂಡ ಇಂಥ ಗಳಿಗೆ
ಇಳಿದಿಳಿದು ಲಾವದ ಹಾಗೆ ಹೆಪ್ಪುಗಟ್ಟಿದ ನೋವು
ತಣ್ಣಗೆ ಕೊರೆವಾಗ ಒಳಗೆ

ಮಾತು ಬಲಹೀನ, ಮೌನ -  ಹಬ್ಬುತ್ತಿದೆ
ಏನು ಮಾಡಲಿ ಆರ್ತಜೀವ
ಬೆಂಕಿನಾಲಗೆ ಚಾಚಿ ಸುಡುವ ಪ್ರೇಮದ ಕಾವು,
ಒಳಗೆಲ್ಲ ಶೂನ್ಯಭಾವ.

ನನ್ನ ಪದಗಳಿಗಿಲ್ಲಿ ಯಾವ ಬೆಲೆ, ಏನು ನೆಲೆ,
ಭಗ್ನ ಪಂಜರದ ಮೂಕಪಕ್ಷಿ
ಉಸುಕಿನರಮನೆ ಮೇಲೆ ಅಲೆಗಳೆಬ್ಬಿಸಿ ಹೋದ
ರುದ್ರ ಸಾಗರವೊಂದೆ ಸಾಕ್ಷಿ

ಕತೆ,ಕವಿತೆ,ಲಾವಣಿಗೆ ಸಿಕ್ಕುವಂಥಹುದಲ್ಲ
ಗಾಳದೆರೆಹುಳು ; ಸುತ್ತ ನೀರು
ಹಬ್ಬಿ ಹರಡಿದ ದುಃಖವನ್ನು ತಲೆಯಲಿ ಹೊತ್ತು
ಕೆಸರಲುಬ್ಬಸ ಪಡುವ ಬೇರು

ಎಳೆದ ಹಗ್ಗದ ಗುರುತು, ಇಳಿವ ನೆತ್ತರ ಮರೆತು
ಓಡುವಂತಿದೆ ಎಳಸು ಕಾಲು
ಅಪ್ಪಿ ಹಿಡಿದರೆ ಸಾಕು, ಉಬ್ಬಿ ಬರುವುದು ಕೊರಳು
ಊಡದಿರು ಮಾತ್ರ ವಿಷಹಾಲು

ಕಣ್ಣ ತೊಟ್ಟಿಂದ ತೊಟ್ಟಾಗಿ ಇಳಿದಿದೆ ನೀರು
ಸುಡುವ ಕೆನ್ನೆಯನೊಮ್ಮೆ ಒರೆಸು
ಗರಿ ಸುಟ್ಟ ಗುಬ್ಬಚ್ಚಿಯಂತೆ ಬೇಡುವೆ ನಿನ್ನ
ಯಾಕಿನ್ನೂ ಕಲ್ಲು ಮನಸು?

Tuesday, March 6, 2012

ಕಾರಣ

ಹೆಣ್ಣೇ ಹೆಣ್ಣೇ ನವಿಲಿನ ಕಣ್ಣೇ
ಯಾಕೆ ಇಂಥ ಮುನಿಸು?
ಹೊದಿಕೆಯಿಂದ ಹೊರಬಾರೆ ಸಖೀ
ತುತ್ತು ಪ್ರೀತಿ ಉಣಿಸು

ನಿನಗೇ ಗೊತ್ತಿದೆ, ಹೇಳಲು ಏನಿದೆ
ಮೆನೇಜರನ ರಂಪಾಟ
ಸಿಡಿಯುವ ತಲೆಯಲಿ ಬರುವೆನು ಮನೆಗೆ
ಬಿಡು ಈ ಕೋಪದ ಆಟ


ಹೊಸೂರು ರೋಡಿನ ಗಿಜಿಗಿಜಿಯಲ್ಲಿ 
ಟ್ರಾಫಿಕ್ಕಿನ ಗೋಳು
ರುಂಡ-ಮುಂಡಗಳಿಗೂನವಾಗದೆ
ಬಂದರೆ ಪಾವನ ಬಾಳು!

ಹೋದೆನು ಕಣೆ ನಾ ಮಾರ್ಕೆಟ್ಟಿಗೆ, ನೀ
ಹೇಳದೆ ಇದ್ದರು ಕೂಡ
ತಂದೆನು ನೋಡು - ಬೆಂಡೆ, ಬಟಾಣಿ,
ಮೊಟ್ಟೆ, ಹಾಲು, ಪಕೋಡ


ಹೇಳಿದ್ದೆಲ್ಲ ಮಾಡುವೆನಲ್ಲೇ,
ಏತಕೆ ಈ ಬಿಗುಮಾನ
ಸಂಬಳವಷ್ಟೂ ನಿನ ಕೈಯಲ್ಲೇ
ಇಡುವೆನಲ್ಲ, ಓ ಸೋನ?

ಚಿನ್ನದ ಬೆಲೆಯೋ ಹಾರಿದೆ ಮೇಲೆ
ಇಳಿಯುವ ಮಾತೇ ಇಲ್ಲ
ಆದರೂ ನೆಕ್ಲೆಸ್ ಹಾಕುವೆ ಕೊರಳಿಗೆ
ಈ ಥರ ಸಿಟ್ಟು ಸಲ್ಲ


ಅಡುಗೆ ಮಾಡುವೆ, ಪಾತ್ರೆ ತೊಳೆಯುವೆ
ಗುಡಿಸುವೆ ಒರೆಸುವೆ ಒಗೆವೆ
ರೋಜಾ ಮುಡಿಸಿ ಲಿಪ್-ಸ್ಟಿಕ್ ಬಿಡಿಸಿ
ಬಗೆ ಬಗೆ ಫೋಟೋ ತೆಗೆವೆ

ಅತ್ತೇ-ಮಾವ ಬಂದರೆ ಮನೆಗೆ
ಮುದುರಿದ ಇಲಿಮರಿ ನಾನು
ನಿನಗೋ ವಿಧೇಯ ಗುಲಾಮ ನಾನು
ಕೋಪಕೆ ಕಾರಣ ಏನು?

********
********

"ಸಾಕು ಬಿಡಿ ಈ ಮುದ್ದಾಟ
ಮಾತಿನ ಮಂಟಪ, ಅಪ್ಪುಗೆ.
ಅನುಭವಿಸ್ತಾ ಇದ್ದೀನಿ - ತಾಳಿ
ಕಟ್ಟಿಸಿಕೊಂಡ ತಪ್ಪಿಗೆ.

ಬಳಲಿ ಬೆಂಡಾಗಿ ಕುಸಿದೆ, ಇಡೀ ದಿನ
ಕಾದೂ ಕಾದೂ ಕಾದೂ
ನೆನಪಾಯಿತೇ ಹೇಳಲು ಒಮ್ಮೆಯಾದರೂ
'ಹ್ಯಾಪೀ ಬರ್ತ್ ಡೇ ಟೂ ಯೂ'??"