Thursday, May 28, 2020

ಆತ್ಮಬಲ

ಅನಾದಿ ನಾ, ಅನಂತ ನಾ, ಅವಧ್ಯ ನಾ ಕಣಾ!
ಕೊಲ್ಲ ಬಂದ ವೈರಿಗೂ ಮೃತ್ಯು ನಾ ಕಣಾ!

ಧರ್ಮಕಹಳೆ ಮೊಳಗಿಸುವೆ
ಮೃತ್ಯುವನ್ನೆ ಮಲಗಿಸುವೆ
ಯುದ್ಧಭೂಮಿಯಲ್ಲಿ ಯೋಧನಾಗಿ ಸೆಣಸುವೆ!
ಖಡ್ಗ ಎನ್ನ ಕತ್ತರಿಸದು
ಅಗ್ನಿ ಎನ್ನ ಹೊತ್ತುರಿಸದು
ಎರಗಿ ಬಂದ ಮರಣಪಕ್ಷಿಯನ್ನೆ ಮಣಿಸುವೆ!

ಅನಾದಿ ನಾ, ಅನಂತ ನಾ, ಅವಧ್ಯ ನಾ ಕಣಾ!
ಪಾಶ ಕಂಡು ಬೆದರುವೆನೆ? ಸಿದ್ಧ ನಾ ಕಣಾ!

ಮೃಗದ ಪಂಜರವನು ಹೊಗುವೆ
ತಳ್ಳು ಅತ್ತ, ಹೇಡಿ ಮಗುವೆ!
ನಮ್ರ ದಾಸನಾಗಿಸುವೆ ಕ್ರೂರ ಸಿಂಹವ!
ಧಗಧಗಿಸುವ ಅಗ್ನಿಜ್ವಾಲೆ
ಸುರಿದು ಸುಡಲಿ ನನ್ನ ಮೇಲೆ
ತಣಿಸಿ ಅದನೆ ಹೊದ್ದು ನಿಲುವೆ, ನಾ ಅಸಂಭವ!

ಅನಾದಿ ನಾ, ಅನಂತ ನಾ, ಅವಧ್ಯ ನಾ ಕಣಾ!
ಸಿಡಿಲಿನ ಮರಿ ಭರತಪುತ್ರ ಬುದ್ಧ ನಾ ಕಣಾ!

ಯಂತ್ರ ತಂತ್ರ ಏನೆ ಇರಲಿ
ಶಸ್ತ್ರ ಅಸ್ತ್ರ ಎಲ್ಲ ಬರಲಿ
ಎದೆಯನೊಡ್ಡಿ ನಿಲುವೆ ಬಿಡದೆ ಆತ್ಮಗೌರವ;
ಹಾಲಾಹಲ ಉಂಡು ನಗುವೆ
ಶತ್ರುಗಳನು ಸೀಳಿ ಸಿಗಿವೆ
ನಾನು ಕಣಾ ವೈರಿಗಳಿಗೆ ಕಾಲಭೈರವ!

ಅನಾದಿ ನಾ, ಅನಂತ ನಾ, ಅವಧ್ಯ ನಾ ಕಣಾ!
ಭಾರತಾಂಬೆ ಮಡಿಲ ಕೂಸು, ನಾ ಸನಾತನಾ!

(ಮೂಲ ಮರಾಠಿ: ವಿನಾಯಕ ದಾಮೋದರ ಸಾವರ್ಕರ್ ಅವರ ಕವಿತೆ 'ಆತ್ಮಬಲ')