Friday, July 9, 2010

ನಾಂದಿ ಪದ್ಯ (ಬೆನಕನ ಸ್ತುತಿ)

ಕಂಡೀರೇನೆ ಎಂಥಾ ಮಗನ ಪಡೆದಳೆಂದು ಪಾರ್ವತಿ!
ಇಂಥ ಮಗನ ಕೂರಿಸಿಟ್ಟು ಎತ್ತಿರೆಲ್ಲ ಆರತಿ.

ನರಮಾನವ ಹೊಟ್ಟೆ ಮೇಲೆ ಆನೆ ತಲೆಯು ಕೂತಿದೆ
ಬೀಸಲೆರಡು ಅತ್ತ ಇತ್ತ ಕಿವಿಯು ಮೊರದ ಹಾಗಿದೆ

ದೊಡ್ಡ ಹಣೆಯ ಆಚೆ-ಈಚೆ ಪುಟ್ಟ ಕಣ್ಣು ಪಿಳಿಪಿಳಿ
ಡೊಳ್ಳು ಹೊಟ್ಟೆ ಬಿರಿಯದಂತೆ ಹಾವು ಬಿಗಿದ ಸರಪಳಿ

ಇನ್ನೂ ಬೇಕು, ಇನ್ನೂ ಬೇಕು ಎನುವ ಹೊಟ್ಟೆಬಾಕಾ
ಅಗಿದು ತಿನಲು ಮಾತ್ರ ನಿನಗೆ ಒಂದೇ ದಂತ ಸಾಕ?

ನೀನು ಹೊರಟು ನಿಂತರೆ ಸುತ್ತಿಬರಲು ಮೂಲೋಕ
ಜೀವಭಯದಿ ನಡುಗುತಾನೆ ನಿನ್ನ ಗೆಳೆಯ ಮೂಷಿಕ!

ಕಾದಿರುವರು ನಿನಗಾಗಿಯೇ ಎರಡು ಹೆಣ್ಣು, ಒಡೆಯನೆ
ಹೇಗವರಿಗೆ ಸೊಂಡಿಲಲ್ಲಿ ಮುತ್ತನಿಡುವೆ ಮಡೆಯನೆ!

ಬೇಡಿದವರ ಇಷ್ಟದಂತೆ ನಡೆವೆಯಂತೆ ಹೇರಂಭ!
ನಿನ್ನ ಹೊಗಳುಸೇವೆಯಿಂದ ನಮ್ಮಾಟದ ಆರಂಭ

ಹೇರಂಭಾ, ಏಕದಂತ, ಗೌರೀಸುತ, ಬೆನಕಾ
ನಮ್ಮ ತಪ್ಪು ನುಂಗಿಕೊಂಡು ಕಾಯೋ ಕೊನೆ ತನಕ

ನಿನಗು, ನಿನ್ನ ಹಡೆದವರಿಗು ಮಾಡುತ್ತೀವಿ ನಮನ
ಇರಲಿ ನಮ್ಮಾಟದಲ್ಲಿ ನಿನ್ನ ಪ್ರೀತಿ, ಗಮನ!

(ನನ್ನ ಹೊಸ ನಾಟಕ "ಚಮತ್ಕಾರ"ದ ನಾಂದಿ ಪದ್ಯ)

ಕೆಂಕಪಿಯ ಹಾಡು

ನಾನೇ ರಾಜಕುಮಾರ
ಕಪಿಗಳ ಸರದಾರ
ಅಂಥಾ ಅಜ್ಜನ ಇಂಥಾ ಮೊಮ್ಮಗ,
ನನ್ನಯ ಮಹಿಮೆ ಅಪಾರ! :)

ಅಜ್ಜನ ಹಾಗೆ ನಾಗೂ ಜಿಗಿದೆ
ಕೆಂಪಿನ ಹಣ್ಣು ಹಿಡಿಯೋದಕ್ಕೆ
ಕಿಲಾಡಿ ಹಣ್ಣು ತಪ್ಪಿಸಿಕೊಂಡು,
ಊದಿತು ಮುಸುಡಿ, ಮುರಿಯಿತು ಪಕ್ಕೆ :(

ಅಜ್ಜನ ಹಾಗೆ ನಾನೂ ಹಾರಿದೆ
ಬಾಲಕೆ ಕಿಚ್ಚು ಹೊತ್ತಿಸಿಕೊಂಡು
ಉರಿಯಲಿ ಉರಿಯಲಿ ಎನ್ನುತ ಸುರಿಯಲು
ಚೆಲ್ಲಿತು ಎಣ್ಣೆ, ಉರಿಯಿತು ಅಂಡು :(

ಅಜ್ಜನ ಹಾಗೆ ತಡಕಾಡಿದೆನು
ಮಹೆಂದ್ರಗಿರಿಯಲಿ ಸಂಜೀವನಿಗೆ
ಗಿರಿ ಹೊರಲಾರದೆ, ಗಿಡವೂ ಸಿಕ್ಕದೆ
ಕೊನೆಗೋಡಿದೆನು ವೈದ್ಯರ ಮನೆಗೆ :(

ಅಜ್ಜನ ಹಾಗೆ ಹುಡುಕಿದೆ ನಾನೂ
ನನಗೂ ತೋಟದಿ ಸಿಕ್ಕಿದಳು
ಇವಳೇ ಇರಬಹುದೆನ್ನುತ ಉಂಗುರ
ತೋರಲು ಹೋದರೆ ಇಕ್ಕಿದಳು :(

ನಾನೇ ರಾಜಕುಮಾರ
ಪರಾಕ್ರಮದ ಅವತಾರ,
ಯಾರಿದ್ದಾನೆ ನನಗೆ ಎದುರು ನಿಲ್ಲೋ ಧೀರ? :)

(ನನ್ನ "ಮೃಗ ಚೆಲುವೆ" ನಾಟಕದ ಹಾಡು)

ವಿಧಿಯ ಹಾಡು

ಹುಟ್ಟಿದ ಮೂರು ಗಳಿಗೆಯಲಿ
ಬರುತ್ತಾನೆ ತುಂಟ
ಬಡವನಿಗೆಂತೋ ಹಾಗೇನೆ
ಧನಿಕನಿಗೂ ಅವ ನೆಂಟ

ಭವಿಷ್ಯ ಎಂಬುದು ಬಳಪದ ಕಡ್ಡಿ
ಹಣೆ ಅವನ ಸ್ಲೇಟು
ಗೀಚುವನಲ್ಲಿ ಅಡ್ಡಾದಿಡ್ಡಿ
ಅಕ್ಷರ, ಚಿತ್ರ, ಗೀಟು

ಬಡವನ ನಾಲಿಗೆಗೂ ತಾಗಿಸುವನು
ಕೆಲವೊಮ್ಮೆ ಹನಿಜೇನು
ಧನಿಕನ ಮೀಸೆಗು ಮಣ್ಣು ಮೆತ್ತುವನು
ನೆಟ್ಟಗಾಗಿಸುವ ಗೂನು

ಹರಿಶ್ಚಂದ್ರನಿಗೆ ಮಸಣ
ಶಕುಂತಲೆಗೆ ವಿರಹ
ಸೀತೆಗೆ ಕಾಡು - ಎಲ್ಲಕು ಕಾರಣ
ಅವನು ಬರೆದ ಹಣೆಬರಹ.

(ನನ್ನ "ಮೃಗ ಚೆಲುವೆ" ನಾಟಕದ ಹಾಡು)

Thursday, July 1, 2010

ನೆನಪಿನ ಮಳೆ

ಭೋರೆಂದು ಘೀಳಿಡುವ ಮಳೆಯಲ್ಲಿ ಬಂದವರ
ನೆನೆದ ಅಂಗಿಗಳಲ್ಲಿ ಅವನ ನೆನಪು
ಅವರಿಳಿಸಿ ಮುಚ್ಚಿಟ್ಟ ಕಡುಕಪ್ಪು ಕೊಡೆಯಲ್ಲಿ
ಇಳಿವ ಹನಿ ಹನಿಯಲ್ಲಿ ಅವನ ನೆನಪು

ಉಪಚಾರ ಮಾತಿನಲಿ, ಕೈ ಕುಲುಕು, ನೋಟದಲಿ,
ಬಿಸಿ ಕಾಫಿ ಕಪ್ಪಿನಲಿ ಅವನೇ
ಉಟ್ಟ ಜರಿಸೀರೆಯಲಿ ಹೊಳೆವ ಬಣ್ಣಗಳಲ್ಲಿ
ಬಿಡಿಸಿಟ್ಟ ಚಿತ್ತಾರ ಅವನೇ

ಅವರು ಕೇಳಿದರೆಂದು "ಯಾವ ಮೋಹನ ಮುರಳಿ
ಕರೆಯಿತೋ"ಎಂದಾಗ ಬಂದ
ಇಟ್ಟ ವೀಣೆಯ ಮೇಲೆ ನಡುಗು ಬೆರಳುಗಳಿಂದ
ತಂತಿ ಮೀಟಲು ಹಾಡು ತಂದ

ಹೂವು ಹಣ್ಣಿನ ರಾಶಿ, ಪೂಜೆ, ಆರತಿ, ಬೆಳಕು,
ಗಂಧ - ಅಕ್ಷತೆಯಲ್ಲಿ ಅವನು
ಅವರಿವರ ಮಾತು ನಗೆ ಚಪ್ಪಾಳೆ ಸದ್ದಿನಲಿ
ಕಳೆದು ಹೊದಾನೇನೋ ಅವನು

ಸಿಕ್ಕಾದ ಮೊಲ್ಲೆ ಜಡೆ, ಬಿಚ್ಚಿಟ್ಟ ಸೀರೆ,ಸರ
ಉಂಗುರದ ಬೆರಳಲ್ಲಿ ಅವನ ನೆನಪು
ತಿಂಗಳಾಗಲು ತುಂಬಿ ತೊಳೆದುಹೋಗುವ ಬಸಿರು
ಬಚ್ಚಿಟ್ಟ ಉಸಿರಿನಲಿ ಅವನ ನೆನಪು..