Monday, February 17, 2020

ಇದೆ ನಾಳೆ


ಮಗು ನಾನು
ನಿನ್ನೆ ಅಂಗಾತ ಮಲಗಿದರೆ ಹೊರಳುವುದಕ್ಕೂ
ಗೊತ್ತಿಲ್ಲದೆ ಕೈಕಾಲನ್ನಷ್ಟೆ ಬಡಿಯುತ್ತಿದ್ದ ಮಾಂಸಲ
ಮುದ್ದೆ ನಾನು, ಆಮೇಲೆ ನಿನ್ನ
ಎದೆಹಾಲ ಕುಡಿದು ಬೆಳೆದೆನಮ್ಮ
ಹೊರಳಿದೆ, ತೆವಳಿದೆ, ನಿನ್ನ ಬೆಚ್ಚನೆ ತೋಳುಗಳ ತಬ್ಬಿ
ಮಲಗಿದೆ, ನಡೆವ ಕನಸ ಕಂಡೆ, ಕನಸಲ್ಲಿ ನಡೆದು
ಬಂದೆ, ನೀನೆತ್ತಿ ಮುತ್ತಿಟ್ಟು ತಬ್ಬಿದೆ, ನಾನು ಉಬ್ಬಿದೆ.

ನಿನ್ನ ಅಭಯಹಸ್ತ ನನ್ನ ಬೆನ್ನ ಮೇಲಿರುವಾಗ
ನನಗೇತರ ಚಿಂತೆ! ತೆವಳುತ್ತ, ಅಂಬೆಗಾಲಿಡುತ್ತ
ಮನೆಯನ್ನಳೆದೆ, ಅದೊಮ್ಮೆ ಕಾಲಿಗೆ ಬಲ ಬಂತು, ನೆಲಕ್ಕೂರಿದೆ,
ತೊಡೆಗೆ ಬಲ ಬಂತು, ಕೂತೆ, ಮೊಣಕಾಲು ಗಟ್ಟಿಯಾಯಿತು,
ನಿಂತೆ. ನೀನು ಚಪ್ಪಾಳೆ ತಟ್ಟಿ ಅಭಿನಂದಿಸಿದೆ, ಹುರಿದುಂಬಿಸಿದೆ.
ನಾನು ಒಂದೊಂದೆ ಹೆಜ್ಜೆ ಮುಂದಿಟ್ಟೆ, ಬಲ
ಸಾಲದೆ ಮಾಲಿದೆ. ಬಿದ್ದೆ, ತರಚಿತು, ಗಾಯ ಉರಿಯಿತು,
ಕಣ್ಣಿಂದ ಒಂದೆರಡು ಹನಿ ಹರಿಯಿತು, ನಿನ್ನ ಮಮತೆಯ ಕೈ
ಗಾಯದ ಮೇಲೆ ಬೆರಳ ನೇವರಿಸಿ ಒಂದೆರಡು ಸಾಲು ಬರೆಯಿತು,
ನೋವು ಮರೆಸಿತು.

ನಿಂತೆ ಕೊನೆಗೂ ನನ್ನ ಕಾಲ ಮೇಲೇ ನಾನು,
ಕೈಯೆತ್ತಿ ಹಿಡಿದು ಅಪ್ಪಿದೆ ಬಾನು, ನಡೆಯಲು ಕಲಿತೆ
ಒಂದೊಂದೆ ಹೆಜ್ಜೆ ಮುಂದಿಡುತ್ತ ನಿನ್ನ ಬೆರಳ ಹಿಡಿದು;
ನಡೆಯಲಿದೆ ದೃಢವಾಗಿ ನನ್ನ ದಾರಿಯಲ್ಲೇ ನಾನು ಯಾರ
ಆಸರೆ ಬಯಸದೇ, ಓಡಲಿದೆ, ಜಿಗಿಯಲಿದೆ, ಹಾರಲಿಕ್ಕಿದೆ ಮೇಲೆ.
ನಡೆವಾಗ ಎಡವಿದ್ದು, ಉಳುಕಿದ್ದು, ಮುಗ್ಗರಿಸಿ ಬಿದ್ದದ್ದು ಸೋಲೆ?
ಏನಲ್ಲ, ನಡೆವ ದಾರಿಯಲ್ಲೊಂದಷ್ಟು ಸವಾಲು ಅಷ್ಟೆ.
ದಾರಿ ಹೀಗೇ ಇರುವುದು ನಾಳೆಯೂ, ನೆಲ - ಬಾನು
ಇಲ್ಲೇ ಇರುವುದು ನಾಳೆಯೂ, ಇತಿಹಾಸದ ಪುಸ್ತಕದಲ್ಲಿ ಉಳಿದಿದೆ
ಇನ್ನೂ ನೂರಾರು ಹಾಳೆಯೂ.

ಚಿತ್ತಾದರೆ ಅಳಿಸಿ ಅಥವಾ ಹಾಗೆಯೇ ಉಳಿಸಿ
ಹೊಸ ಸಾಲು ಬರೆಯಬಹುದು. ಎಡವಿದರೆ ಮತ್ತೆ ಮೈ ಕೊಡವಿ
ಎದ್ದು ನಡೆಯಬಹುದು. ಪೂರ್ಣವಿರಾಮ ಬಂದೇ ಬಿಟ್ಟರೂ ವಾಕ್ಯ
ಮುಗಿಯಿತೆಂದಲ್ಲ, ಮತ್ತೊಂದರ ಆರಂಭವೂ ಆಗಬಹುದು.
ದಾರಿಯಿದೆ ಇನ್ನೂ, ಗಟ್ಟಿ ಇದೆ ಬೆನ್ನು,
ನಿನ್ನ ಆರೈಕೆ, ಪ್ರೀತಿ, ಹಾರೈಕೆ
ಇದ್ದರೆ ಸಾಕಮ್ಮ ಗೆಲ್ಲುವೆ ಇಂದಲ್ಲ ನಾಳೆ!
ಗೆದ್ದು ಸಂಪಾದಿಸಿ ತರುವೆ ಜಗದ ಚಪ್ಪಾಳೆ!