Saturday, February 21, 2015

ಹಾಯ್ಕುಗಳು: ಬಾಹುಬಲಿ ಮರ

ಎಲೆ ಕಳಚಿ ಸತ್ತಂತೆ ನಿಂತಿರುವ
ಮರದಲ್ಲಿ ಎಂದೋ
ಬಾಳಿದ್ದ ಸಂಸಾರದ ಗುರುತುಗಳು
.
.
ಚಳಿ ಕಳೆದದ್ದೇ ತಡ
ಬರುಬತ್ತಲಾಗಿ ನಿಂತಿದೆ ಈ
ನಾಚಿಕೆಗೆಟ್ಟ ಮರ
.
.
ಏಸುವಿನ ತಲೆಯ ಮುಳ್ಳಿನ
ಕಿರೀಟದಂತೆ ಈ ಬತ್ತಲೆಮರದಲ್ಲಿ
ಗೂಡುಗಳ ಗೊಂಚಲು
.
.
ಮತ್ತೊಂದು ವರ್ಷ ಕಳೆಯಿತೆಂದು
ದಳದಳ ಅತ್ತು ಉದುರಿದ
ಕಂಬನಿಯಂತೆ ಈ ಎಲೆ
.
.
ಪೂನಂ ಪಾಂಡೆಯಂತೆ ಮಾತು ಕೊಟ್ಟು
ಮುರಿಯುವುದಿಲ್ಲ ಎಂದಿದೆ
ಶಿಶಿರದ ಮರ
.
.
ಈ ಶಿಶಿರ ದುಶ್ಶಾಸನ
ಸೆಳೆಸೆಳೆದು ಹಾಕುತ್ತಿದ್ದಾನೆ
ಬಾರಯ್ಯ ವಸಂತ ಬೇಗ
.
.
ತಿರುಪತಿಯಲ್ಲಿ ಸಾಲಾಗಿ ಕೂತ
ತಲೆಗಳಂತೆ
ಶಿಶಿರದ ಮರಗಳು
.
.
ಮರಕ್ಕೆ ಹೆರಿಗೆಬೇನೆ
ಸೂಲಗಿತ್ತಿ ಶಿಶಿರ
ಸೀರೆ ತೆಗೆಸಿದ್ದಾನೆ
.
.
ವಿರಾಗಿ ಬಾಹುಬಲಿಯಂತೆ ನಿಂತಿದೆ
ಮರ ಎನ್ನುವಾಗಲೇ ಕಂಡಿತೊಂದು
ಎಳೆ ಚಿಗುರು
.
.
ಮರದ ಮೈಗೆ ಅಸಾಧ್ಯ ತುರಿಕೆ
ಬಟ್ಟೆ ಕಳಚಿದೆ, ಒಳಗಿಂದ
ಚಿಗುರು ಹುಟ್ಟಿದೆ

1 comment:

  1. ತಮಗೆ ಸರಸ್ವತಿ ಒಲಿದಿದ್ದಾಳೆ.
    ಪದಗಳ ಜೊತೆ ಆಟವಾಡುವ, ಸುಲಭ ಶೈಲಿಯ ಮತ್ತು ಸಾರಸಂಗ್ರಹದಂತೆ ಸಾಹಿತ್ಯವನ್ನು ದುಡಿಸಿಕೊಳ್ಳುವ ಪರಿಯೂ ಸಿದ್ಧಿಸಿದೆ.

    ಯಾವುದಾದರೊಂದು ಹಾಯ್ಕು ಮರು ಅಚ್ಚಿಸೋಣವೆಂದರೆ, ಪೂರ ಕೇ ಪೂರ ultimate.
    ದುಶ್ಶಾಸನನಿಂದ ಪೂನಂ ಪಾಂಡೆಯವರೆಗೆ ಸಮೀಕರಿಸಿದ ಪದ್ಧತಿಗೆ ಪೂರ್ಣ ಅಂಕಗಳು.

    ReplyDelete