Friday, May 28, 2010

ಕನ್ನಡಿಯಲ್ಲಿ ಕಂಡ ಮುಖ

ಒಂದೂರಲ್ಲಿ
ಗಂಡ - ಹೆಂಡತಿ
ಸುಖವಾಗಿದ್ದರು

ಅವಳ
ತವರುಮನೆ ಪೆಟ್ಟಿಗೆಯಲ್ಲಿ
ಪಿಜ್ಜನ ಕಾಲದೊಂದು
ಕನ್ನಡಿ ಇತ್ತು, ಅವಳಿಗೇ
ಗೊತ್ತಿಲ್ಲದ ಹಾಗೆ ಹೇಗೋ
ಬಂದು ಸೇರಿಕೊಂಡಿತ್ತು

ಒಂದು ದಿನ, ಪೆಟ್ಟಿಗೆ ತೆರೆದು
ನೋಡಿದರೆ,
ಎದುರು ಕನ್ನಡಿ -
ದುರುಗುಟ್ಟಿ ನೋಡುತ್ತಿದೆ

ಕಿರುಚಿ ಕಿಟಾರನೆ, ಉರಿದುರಿದು
ಬಿದ್ದು, ಅಂಗೈ ನೆಲಕ್ಕೆ ಬಡಿದು,
ಮನಸಾರೆ ಶಪಿಸಿ, ಹಾಳಾಗಿ ಹೋದೆ
ಯಲ್ಲೋ ನನಗಂಡ ಮುಂಡೇಗಂಡ ಅಂತ
ಗುಟ್ಟಾಗಿ ಬಯ್ದು ಮೈತುಂಬ ಅತ್ತಳು

ಮತ್ತೊಂದು ದಿನ, ಅವನಿಗದು ಹೇಗೋ ಸಿಕ್ಕಿತು
ನೋಡಿದರೆ,
ನೋಡಿತು ಕೆಂಡಾಮಂಡಲ

ಕೂಡಲೇ ಅಂವಾ ಅದನ್ನು
ಹಿಡಿದೊಯ್ದು ಬಯಲಲ್ಲಿತ್ತು ಒದ್ದು ಪುಡಿಗುಟ್ಟಿ
"ಥೂ" ಉಗುಳಿದ.

ಇನ್ನೊಂದು ದಿನ, ಅವಳು
ಹುಡುಕುತ್ತಿದ್ದಳು
ಅವನು, "ಏನು?" ಎಂದು, ಅವಳು "ಏನಿಲ್ಲ" ಎಂದು
ಉಗುಳು ನುಂಗಿಕೊಂಡು ಪರಸ್ಪರ
ನೋಡಿ ನಕ್ಕರು

ಮುಂದೆ,
ಸುಖವಾಗಿರುವ ಹಾಗೆ
ನಟಿಸುತ್ತ
ಸುಖವಾಗಿದ್ದರು.

ಒಂದು ಹೆಸರಿಲ್ಲದ ಪದ್ಯ

ರಷಿಯ ದೇಶದ ಯಾವುದೋ
ಸುಡುಗಾಡು ಊರಲ್ಲಿ ಒಂದು
ಭಲೇ ಮೋಜಿನ ಪದ್ಧತಿ
ಇದೆಯಂತೆ -

ಮನೆಯಲ್ಲಿ ಯಾರಾದರೊಬ್ಬ ಹಿರಿಯ
ಸತ್ತಾ ಅಂದರೆ
ಗೊಳೋ ಅತ್ತು
ಊರೆಲ್ಲ ನೆರೆಸಿ, ಗಳ ಕಟ್ಟಿ
ಚಟ್ಟ ಹತ್ತಿಸಿ ಊರಾಚೆ
ಸಾಗಿಸಿ, ಮುಗಿಸಿ ಎಲ್ಲ ಕೆಲಸ
ಉಸ್ಸೋ ಅಂತ ಸಮಾಧಾನಿಸಿಕೊಂಡು
ವಾಪಸು ಬಂದು ಮನೆ
ಮಂದಿಯೆಲ್ಲ ಬಿಸಿ ಬಿಸಿ
ದೋಸೆ ತಿನ್ನಬೇಕಂತೆ

ನನ್ನಜ್ಜ ಸತ್ತಾಗ ಕಣ್ಣು ಹನಿ
ಗೂಡುವ ಮೊದಲೆ ಈ ಸುಡುಗಾಡು
ಕತೆ ನೆನಪಾಗಿ
ಕಸಿವಿಸಿಯಾದ ಬಿಸಿ ಈಗಲೂ
ಇದೆ ಯಾಕೋ

ಗೊತ್ತಿಲ್ಲ.

ಸರ್ವಾಧಿಕಾರಿಗೆ ಅನಿಸಿದ್ದು

ಕಾಂಬೋಡಿಯಾ ಅನ್ನುವ ದೇಶ
ಪೋಲ್ ಪಾಟ್ ಅನ್ನುವ ನಿರಂಕುಶ ಸಲಗ

ಅವನ ಹಿಂದೆ ಲಕ್ಷ ಕೋವಿಯ ಬಳಗ
ಮಾಡಿದ ಒಂದೇ ಕೆಲಸ
ಅಂದರೆ, ಎಂಜಾಯ್ ಮಾಡಿದ್ದು
ಯಾರೋ ಕೂಡಿಟ್ಟದ್ದು
ಮಾಡಿಟ್ಟದ್ದು,
ಕುಡಿದದ್ದು ರಕ್ತ, ನೆಕ್ಕಿದ್ದು
ಬೆವರು, ಕಾಲೂರಿ ನಡೆದದ್ದು ಎದೆ ಮೇಲೆ

ಗುಂಡು ಹಾರಿಸಲು ಇಟ್ಟ ಟಾರ್ಗೆಟ್ಟು ಎಂದರೆ
ತಲೆಬುರುಡೆ ಕಣ್ಣಿನ ಗುಳಿ
ಚಪ್ಪರಿಸಿದ್ದು ಹಂದಿಮಾಂಸದ ಜೊತೆ ಮಕ್ಕಳ
ಲಿವರಿನ ಸೂಪು

ಅವನು ಕೈ ಎತ್ತಿದರೆ ಲಕ್ಷ ಕೈ
ಉರುಳುತ್ತಿತ್ತು
ಅವನು "ಫೈರ್" ಅಂದರೆ ದೇಶ
ತುಂಬ ಹೊಗೆ

ಹೀಗಿರಲಾಗಿ ಒಂದು ದಿನ ಆ ಲಕ್ಷದಲ್ಲಿ ಇಬ್ಬರು
ಎಳೆಮೀಸೆಗಳು
ಬಂದು ಎದುರು ಎದೆ ಸೆಟೆದು
ನಿಂತು ಕೋವಿ
ಕೈಬಿಟ್ಟು ತಣ್ಣಗೆ ಹೇಳಿದರು:
"ನಾವಿನ್ನು ಟ್ರಿಗರ್ ಒತ್ತೋದಿಲ್ಲ
ಅಂದರೆ ಒತ್ತೋದಿಲ್ಲ"

ಏನಾಯ್ತು ಅಂತೀರ?

ಮರುದಿನ ಸೂರ್ಯ ಕಾಣೋ ಮೊದಲೆ
ಆ ದೇಶ, ಈ ಜಗತ್ತಿಗೆ ಗುರುತು
ಸಿಗದ ಹಾಗೆ, ಅಣು - ರೇಣು - ತೃಣ - ಕಾಷ್ಟಕ್ಕೆ ಸೇರಿ
ಹೋದ ಹಾಗೆ, ಲಕ್ಷ ಕೋವಿಗಳ ಕಣ್ಣಿಗೆ ಬೀಳದ ಹಾಗೆ, ಇನ್ನಿಲ್ಲದ

ಹಾಗೆ, ಪರಾರಿ
ಪೋಲ್ ಪಾಟ್.

ಊರ್ಧ್ವಮೂಲ

ರಣಪೀಡೆ ಅಂತಾರಂತೆ ಈ ಕಡೆ
ಜನ - ಉದ್ದ ಮೂಗಿನ ಸೊಟ್ಟ
ಮೂತಿ ಕೆದರಿದ ತಲೆ
ನೀರಿಲ್ಲದೆ ಸತ್ತವರ ಪಿಶಾಚಿ

ರಾತ್ರಿ ಬಲೆ ಬೀಸೋಣ ಅಂತ
ಹೋದವರು ಬೀಸಿದ
ಬಲೆಗೆ ಬಿದ್ದ ಮೀನಷ್ಟನ್ನು
ತಂದು ಹರಡಿ ಮರಳ ಮೇಲೆ
ಒರಗೋಣ ಅಂತ
ಬಿದ್ದರೆ

ಕಳ್ಳ ಕಳ್ಳ ಹೆಜ್ಜೆ ಇತ್ತು ಬಂದ ಪೀಡೆ
ತಲೆ ಬಳಿ ಕೂತು
ಮರಲೋಕ್ಕಿ ಎರಡಡಿ ಹೊಂಡ ತೋಡಿ
ತಲೆಯಿಟ್ಟು ನಿಧಿಯ
ಹಾಗೆ ಮರಳು ಮುಚ್ಚಿ ಸದ್ದಿಲ್ಲದೆ
ಪರಾರಿಯಾಗುತ್ತಂತೆ

ಇಂಥ ಒಂದು ಸಾವು
ಕಂಡ ದಿನ
ರಾತ್ರಿ ಕಂಡ ಕನಸಲ್ಲಿ ಅದೇ

ಭೂತ ಬಂದು ನನ್ನ
ತಲೆ ಹೂತು ಮಣ್ಣು
ಮುಚ್ಚಿ ಹೋದಾಗ, ಕೈಕಾಲು
ಸೊಂಟವೆದ್ದು

ಬುಡಮೇಲು ಅಶ್ವತ್ಥವಾಗಿ
ನಿಂತಂತಾಗಿ ದಿಗಿಲಾಗಿ ಧಿಗ್ಗನೆದ್ದು
ನೀರು ಕುಡಿದೆ.

ಯಶೋಧರ ಸ್ವಗತ



ಹಾ! -
ದರ ನಡೆದುಹೋಯಿತು ನನ್ನೆದುರಲ್ಲೆ
ಕಣ್ಣೆದುರಲ್ಲೆ, ಬಾಳೆದುರಲ್ಲೆ, ವರ್ಷಗಳ
ಖ್ಖಂಡ ದಾಂಪತ್ಯದೆದುರಲ್ಲೆ -

ಒರೆಗಳೆದ ಕತ್ತಿ
ಹಿರಿದೆತ್ತಿ ತರಿಯಲೆ ಮಾಳವಸಿರಿ
ತುರಿಸಿಕೊಳ್ಳಲೇ ಮಧ್ಯ ಮಜಘನ್ಯ ಬರಿಸಿಕೊಳ್ಳಲು
ಕತ್ತರಿಸಿ ಒಗೆಯಲೆ ಒಡ್ಡಿದ ತೊಡೆ?

ಬಗೆ ಬಗೆ ಬಗೆ
ದು ಬಿಡಲೆ ತಿರ್ಯಗ್ಯೋನಿಗಳ
ಭವ ಹೊಗಿಸಿದ ಗಂಟು
ಬಿದ್ದವನ ರಸಿಕೆಯ

ಮಥಿಸಿ ಬಿಡಲೆ?
ಹಾ! ಪರವಶವು ಎನಲೆ?



ನಿನ್ನೊಳಗು ಕಾಣೆ ಕನ್ನಡಿಯ ಹಾವೆ,
ಎತ್ತ ಕಣ್ಣು, ಎಷ್ಟು ಮುಖ?
ಎಷ್ಟು ದ್ವಾರದ ಹುತ್ತ, ಯಾವ ರಚನೆ,
ಯಾವ ಕಡೆ ಹೇಗೆ ಸುಖ?

ಬಾಗಿಲಿಲ್ಲದ ಕೋಟೆ ಒಳಗೆ ಬಾಗಿಲೆ ಎಲ್ಲ
ಏಳು ಮಾಳಿಗೆ ಕೆಳಗೆ ಬಚ್ಚಲ ಮನೆ
ಹೊಳೆವ ಚಿನ್ನದ ಕಿರೀಟದೊಳಗೆ ಬೆಳ್ಳಿಯ ಸರಿಗೆ
ಸುಳ್ಳು ಬಸಿರಿನ ಕಳ್ಳ ಹಸಿಕಾಮನೆ

ಕಿಸುರುಗಣ್ಣಿನ ಡೊಂಕುಬಸಿರು ಒದ್ದರೆ ಮರ್ಮ
ಹುಸಿನಗುವ ಕಿಸಬಾಯಿ ಊರು
ಒರಲೆ ಹೂ ಬಿಟ್ಟ ದೊಗರು ಬೊಡ್ಡೆಯ ಕೆಳಗೆ
ಅಲೆಮಾರಿ ಕಾಡುಬೇರು

ಹುಟ್ಟು ನಿಂತರೆ ಮುಳುಗೆ? ಮುಳುಗಿದರೆ ಹುಟ್ಟು
ಪರದೆ ಬಿದ್ದರೆ ಅಂಕ ಕೊನೆ, ಮೊದಲು
ನೇಪಥ್ಯ ಕಂಡೀತು ಪರದೆ ಎದ್ದರೆ, ಇಣುಕಿದರೆ
ರಾವಣ ಸೀರೆಯುಡಿಸಿದ ಸಾಧ್ವಿ ಸೀತೆ

ನಿಂತರೆ ನಿಂತಂತೆ ಸೀತೆ ಪೊರೆಕಳಚಿ
ಕೊರಡು : ಉರಿದೇನು, ಚಿಗುರಿಯೇನೆ?
ತಬ್ಬಲಿಗು ಬೇಕೆ ಬಲಿ ಬೇರೆ? ಕೇಳುತ್ತಿವೆ -
ವಜ್ರದೊರೆ, ಮೊಂಡುಗತ್ತಿ.

Thursday, May 27, 2010

ಹೆಜ್ಜೆ ಗುರುತು

ಒಮ್ಮೆ ಒಬ್ಬ ರಾಜ, ಅವನ ಮಗ
ಹೋಗುತ್ತ ಇದ್ದಾಗ, ಜೊತೆ
ಎರಡು ಹೆಜ್ಜೆಗುರುತು ಎದುರು
ಸಿಕ್ಕಿತು

ರಾಜನಿಗೆ ಕರತಲಾಮಲಕ
ಅರುವತ್ತನಾಲ್ಕು ಕಲೆ. ಹೇಳಿದ,
"ಈ ಎಡಗಡೇದು ಸುಂದರ
ತರುಣಿಯದು. ಬಲಗಡೇದು ಅವಳಮ್ಮನದು.
ನೀನು ಅದಕ್ಕೆ ನಡಿ. ಬಲದಲ್ಲಿ ನಾನು.
ವಶ ಮಾಡಿಕೊಳ್ಳೋಣ ಅವರನು"

ಹೀಗೆ ನಡೀತಾ ಇದ್ದರು, ನಡೀತಾ ಇರುವ ಹಾಗೆ
ನಾವು, ಕೊನೆ ಮುಟ್ಟೋ ಹೊತ್ತಿಗೆ
ಸಿಕ್ಕಿದಳು ಸುಂದರ ತರುಣಿ
ಬಲಕ್ಕೆ, ಅವಳಮ್ಮ - ಎಡಗಡೆ

ವಿನಯ ಗುಣ ಸಂಪನ್ನ ಮಗ,
ಪಾಲಿಗೆ ಬಂದದ್ದೆ ಪಂಚಾಮೃತ ಅಂತ
ತಿಳಿದ, ಹುಸಿನಕ್ಕ ರಾಜ

ಈಗ ಹೇಳು ರಾಜ
ವಿಕ್ರಮ, ಆ ತರುಣಿಗೆ ರಾಜ
ಯಾರು? ರಾಜನಿಗೆ ಮಗ ಯಾರು?
ಹೊತ್ತೊಯ್ದು ಬಂದೆಯಲ್ಲ ಇಲ್ಲಿಯವರೆಗೆ
ಹೆಜ್ಜೆ ಊರಲೂ ಬಿಡದ ಹಾಗೆ
ನನಗೆ, ನೀನು ಯಾರು?

ರಾಣಿ

ಕೆಂಚು - ಬಿಳಿ - ಕಪ್ಪು ತುಪ್ಪಳ
ದಂಥ ರೇಶಿಮೆ ಮೈ
ಮಾಟದ ಚೆಲುವೆ - "ರಾಣಿ",
ಮೈಯಿಡೀ ನಿದ್ದೆ ಹೊದ್ದು ಮಲಗಿದರೆ
ಅಪ್ಪಟ ಮಗು

ಎದ್ದರೆ ಸುಡುವ ಹಸಿವು,
ಕಾಸಿದ ಹಾಲಿಟ್ಟರೆ ಲಚಪಚ
ಮುಕ್ಕಿ ತುಟಿ ನೆಕ್ಕಿ ಸವರುತ್ತ
ಬಾಗಿಲಿಳಿದರೆ ತುಂಬು
ಮೇನಕೆ

ರೋಡಲ್ಲಿ ತೊರಡಿಗೆ ಬಾಲ ವರ್ತುಳ ಸುತ್ತಿ
ಧ್ಯಾನಸ್ಥ ಕುಳಿತ ಮಾರ್ಜಾಲ
ರಾಯರಿಗೆಲ್ಲ ಪುಳಕ - ಇವಳ
ಕ್ಯಾಟ್ ವಾಕ್ ಕಂಡರೆ;
ಚಮಕಿತ - ಇವಲೆಲ್ಲೋ ಆಕಾಶ ಮೂಸುತ್ತ
ನಿಂದರೆ.

ಈ ಕಾಮಿ ಕಂಡೆಬ್ಬಿಸಿದ ಕಿಚ್ಚಿಗೆ
ಬಲಿಯಾಗಿ ಧ್ಯಾನಗೆಟ್ಟ ವಿಶ್ವಾಮಿತ್ರ
ರೊಳಗೇ ಅಂತರ್ಯುದ್ಧ.
ಮೈ ಪರಚಿಕೊಂಡು ಗೆದ್ದ
ಒಂದೆರಕ್ಕಷ್ಟೇ ಇವಳ ಗರ್ಭದಲ್ಲಿ
ಮಲಗಿ ಮರಿಯಾಗಿ
ಹುಟ್ಟಿ ಕಣ್ಮುಚ್ಚಿ ಮೊಲೆ ತಿನ್ನುವ ಭಾಗ್ಯ

*****

ನೂರಾರು ಬಣ್ಣದಲ್ಲಿ ಅದ್ದಿ
ತೆಗೆದ ಬ್ರಶ್ಶು ಬೇಕಾಬಿಟ್ಟಿ
ಆಡಿಸಿ ಬರೆದ ಬಿಳೀ ಕ್ಯಾನ್ವಸ್ಸಿನ
ಚಿತ್ರ - ಇವಳ ಸಂತಾನ;
ಮತ್ತದರ ಚೌಕಟ್ಟು
ಇವಳು.

ನಿ:ಶೇಷ

ಕ್ಲಾಸಲ್ಲಿ ಟೋಪೋಜಿ ಕಲಿಸೋ ಮೇಸ್ಟ್ರು
ಹೇಳಿದ ಕತೆ -

ಒಂದಾನೊಂದು ಊರಲ್ಲಿ ಪಿಕೀರಿಲ್ಲದೆ ಸರಿ
ದಾದತಿದ್ದ ಹಾವೊಂದಕ್ಕೆ ತಲೆ
ತಲಾಂತರದ ಜನ್ಮಶತ್ರು ಮುಂಗುಸಿ
ಮೀಸೆ ಕುಣಿಸುತ್ತ ಎದುರಾದಾಗ ಎಲ್ಲಿಲ್ಲದ ಸಿಟ್ಟು
ಬುಸಬುಸ ಬಂತು

ಮುಂಗುಸಿ ತಣ್ಣಗೆ
ಇದ್ದೀನಿ ಅಂತ ತೋರಿಸಿಕೊಳ್ಳೋದಕ್ಕೆ ಹೋದರೂ
ಮೈ ಮುಳ್ಳೆದ್ದ ಸಂಗತಿ
ಅದಕ್ಕೇ ತಿಳಿದಿರಲಿಲ್ಲ

ಎರಡೂ ಹೀಗೆ ಚಕ್ಕನೆ
ಎದುರೆದುರಾದ್ದರಿಂದ ಏನು ಮಾಡೋದು
ತಿಳಿಯದೆ ಕ್ಷಣಕಾಲ ಮುಖಮುಖ
ಮಿಕಮಿಕ ನೋಡಿದವು

ಜಾಗೃತ ಮುಂಗುಸಿ ತನ್ನೆಲ್ಲ ಕೈ
ಕಾಲೆತ್ತಿ ಬೆರಳುಗುರು ಕೆದರಿತು
ಹಾವು - ಪ್ರತಿಯಾಗಿ ಸಪಾಟ ಹೊಟ್ಟೆಯಡಿ
ಯ ಸಹಸ್ರಬಾಹುಗನ್ನು ಚಕಮಕ
ಮಸೆಯಿತು

ಹಾವು ಹಾರಿದ್ದೆ - ಮುಂಗುಸಿಯ ಬಾಲ
ನುಂಗುತ್ತ ನುಂಗುತ್ತ
ಮುಂಗುಸಿ (ಬಿಟ್ಟೀತೆ?) ತಿರುಗಿ ಹಾವಿನ ಬಾಲ
ನುಂಗುತ್ತ ನುಂಗುತ್ತ

ಯಾವನೋ ದಾಸನಿಗೆ
ಅದರೊಳು
ಇದುವೋ ಇದರೊಳು ಅದುವೋ ಅಂತ ಭ್ರಮೆ
ಹಿಡಿದ ಹಾಗೆ, ಒಂದರೊಳು ಒಂದು ಸೇರಿ
ಸೇರಿಸಿ, ಯಾವುದರೊಳು ಯಾವುದೋ
ಹೋಗಿ ಬಂದು

ಕೊನೆಗುಳಿದದ್ದು
ಪ್ರಶ್ನೆ ಮಾತ್ರ.

ಚಕ್ರ

ಈ ಕೆಂಪು ಹೂ
ಬಿಸಿಲು, ತುಂಬಿ, ಸಿಗರೇಟು ಹೊಗೆ
ಹಾಗೆ ಮಂಜು, ಒಂದಿಷ್ಟು ಹನಿ
ಎಲೆ ಮೇಲೆ, ಜೇಡನ ಬಲೆ

ಕೊಡೆ ಬಣ್ಣದ ಕಡು
ಮೋಡ, ಮಳೆ ಆಗಾಗ, ಚಳಿ
ಗಾಳಿ, ಮರ, ಬೋಳಾಗಿ ಮತ್ತೆ
ಚಿಗುರುವ ಎಲೆ

ಕಪ್ಪೆ - ಜಿಗಿದು ಹೊರಕ್ಕೆ, ಮತ್ತೆ
ತಳಕ್ಕೆ ಪುಳಕ್ಕನೆ ಆಡುವ ಆಟ,
ಕನ್ಯಾಮಾಸಕ್ಕೆ ನಾಯಿಗಳ ಬೇಟ,
ಮತ್ತೆರಡು ತಿಂಗಳಿಗೆ ಜೋಲುವ ಮೊಲೆ

ಸಿಕ್ಕಿದರೆ ಸಾಕು ಮೃತ್ತಿಕೆ, ಕುಡಿ
ಒಡೆದು ಹೊರಡುವ ಜೀ
ವನವನ್ನೆ ಒಂದು
ಬೀಜದೊಳಗಿಟ್ಟ ದಾಳಿಂಬೆ ಕಲೆ

ನಡೆದಷ್ಟು ತೀರ, ಇಳಿದಷ್ಟು ಆಳ,
ಬರೆದಷ್ಟು ಸಲ ಬಂದು ಅಪ್ಪಳಿಸಿ ಅಳಿಸುವ
ಇದು ಯಾರು
ಎಸೆವ ಕಲ್ಲಿಗೆ ಏಳುವ ಅಲೆ?

ಬ್ರಹ್ಮಗಂಟು

ಏನಾದರಾಗಲಿ ಈ ಬಾರಿ
ಹೇಳಲೇಬೇಕು ನಿಜ ಅಂದು
ಕೊಂಡವನೆ ಊರಿಗೆ ಹೋದಾಗ ಯಾಕೋ
ಈ ಹಾಳು ಬೇಸಗೆಯ
ವಿಪರೀತ ಸೆಖೆಯಲ್ಲು ಅಂಗಿ
ಬಿಚ್ಚದೆ ಓಡಾಡಿದೆ

ಬಚ್ಚಲಿಗೆ ಹೋದಾಗಲೂ ಕಳ್ಳ
ನ ಹಾಗೆ ಓಡಿ, ಬಂದು
ಪಾಣಿಪಂಚೆಯಿಂದ ಮುಚ್ಚಿ
ಕೊಂಡು ಬೆವರುತ್ತ ಬೇಗುದಿ
ಪಟ್ಟೆ

ಈ ನಿಮ್ಮ ಆಚಾರ ಕಟ್ಟು
ಕಟ್ಟಳೆ ಕರ್ಮ ಬೇಡವೇ
ಬೇಡ ಅಂತ ಎಸೆದಿದ್ದೇನೆ ಇಗೋ
ಅಂತ ಬರಿಮೈ ತೋರಿಸಿ ಬೆಚ್ಚಿ
ಬೀಳಿಸಬೇಕೆಂದುಕೊಂಡವನು
ಹೀಗೇಕೆ ಆದೇನೋ ಅಂತ

ಬೇಜಾರಾಗಿ ದೇವರ ಮನೆ
ಹಳೆಪೆಟ್ಟಿಗೆ ತೆರೆದು ದಾರದ
ಉಂಡೆ ಬಿಚ್ಚಿ
"ಯಜ್ನೋಪವೀತಂ ಪರಮಂ ಪವಿತ್ರಂ...."
ಅಂತ ಮೂರ್ಮೂರು ಸಾರಿ
ತಪ್ಪೊಪ್ಪಿಗೆಯ ಹಾಗೆ
ಹೇಳಿ ಹಾಕ್ಕೊಂಡೆ

ನೋಡಿ, ಎಷ್ಟು
ಹಾಯೆನಿಸಿತಪ್ಪ!

ಕಾಮ

ಒಂದೇ ಒಂದು ಪುಟ್ಟ
ಉರುಟಾದ ಸುಂದರ ಸರಳ ಸುರುಳಿ
ಎಳೆದು ಜಗ್ಗಿದರೆ ಅದೆ ಕಾಮ

ಆ ಕೊಂಕು, ಆ ಬಿಂಕ, ಬಳುಕು,
ವೈಯ್ಯಾರ ಇದ್ದರೇನೇ ಚಂದ
ಕಾಮಕ್ಕೆ,
ಅಂಥ ಸೊಬಗುಂಟೆ ಪೂರ್ಣ
ವಿರಾಮಕ್ಕೆ?

ಕಾಮದ ಜಾಗ - ಎರಡು
ವಸ್ತುಗಳ ನಡುವೆ, ತುಸು ಕೆಳಗೆ
ಭಿನ್ನವಾದರೂ ಎರಡು, ಸಂಬಂಧ
ವುಂಟೆಂದು ಹೇಳುವ ಗಳಿಗೆ

ಕೆಲವೊಮ್ಮೆ ಸಂಬಂಧ - ವಸ್ತುಗಳ ನೆಲೆಯಿಂದ
ಎತ್ತರಕ್ಕೇರಿದರೆ, ಬಲು ಹತ್ತಿರದ್ದಾದರೆ
ಬೇಕಿಲ್ಲ ಕಾಮ -
ರಾಧಾಕೃಷ್ಣ ಇಲ್ಲವೆ,
ಹಾಗೆ.

ಹೆಚ್ಚಾದರೆ, ಕಾಮ, ಕೆಡಬಹುದು,
ಅರ್ಥ, ಕೆಡಿಸಿ,
ಬಿಡಬಹುದು,
ಮಿತವಾಗಿ ಬಳಸಿದರೆ, ಕಾಮದಿಂದಲೇ,
ಎಷ್ಟೆಷ್ಟೋ ಹೊಸ ಅರ್ಥ
ಕೊಡಬಹುದು.

ಬೇಕುಗಳ ಪಟ್ಟಿಯಲಿ ಕಾಮದ್ದೆ
ಸಾಮ್ರಾಜ್ಯ, ಸಾಲುಸಾಲಲ್ಲಿ ಅದರದ್ದೆ
ತೋರಣ
ಎಷ್ಟೆ ಇದ್ದರು ಕಾಮ ಕಡೆಗೆ ಪೂರ್ಣ
ವಿರಾಮ ಇದ್ದರಷ್ಟೇ ಅರ್ಥ
ಅನ್ನುತ್ತೆ ವ್ಯಾಕರಣ.

Wednesday, May 26, 2010

ಕಂಡದ್ದು

ನಾವು ಹೊರಟ ರೈಲಿನ ಬೋಗಿಯಲ್ಲಿ
ನಮಗೆದುರಾಗಿ ಅಪ್ಪ - ಮಗ

ಚೈತನ್ಯ ಸೊರಗಿದ ಅಪ್ಪನ ವಿವೇಕ
ಮಗನ ಕಣ್ಣಲ್ಲಿ ಮಾಯಾಲೋಕ
ಕಂಡ ವಿಸ್ಮಯ, ಎಲ್ಲ ಎಲ್ಲ ಹೊಸತು
ಎನ್ನುವ ಹಾಗೆ ಎಲ್ಲದರ ಮೇಲೆ
ಬಿರಿದು ಹೋಗುವಷ್ಟು ಕುತೂಹಲ
ನುಂಗಿಬಿಡುವಂಥ ಚಪಲ

"ಅಪ್ಪಾ ನೋಡಲ್ಲಿ ನೋಡು, ಹೇಗೆ
ತಾವೆ ಬಿಳಿಮೋಡ, ಮಗು
ವೊಂದು ಅರಳೆಯ ಮೂಟೆ ಕಿತ್ತು
ಕಿತ್ತು 'ಹೂ' ಅಂತ
ಊದಿ ಬಿಟ್ಟ ಹಾಗೆ, ಹೇಗಿದೆ!"

"ಹೌದಪ್ಪ" ಅಂದ ಅಪ್ಪ.

"ಅಪ್ಪಾ, ನೋಡಿಲ್ಲಿ ಗಿಡಮರ
ಹಕ್ಕಿಪಿಕ್ಕಿ ಹಾರುತ್ತಿವೆ ಹಿಂದೆ
ಹಿಂದೆ, ಕಾಲದ ಕಡಲಲ್ಲಿ
ಹುಟ್ಟು
ಹಾಕಿ ದೋಣಿ ಮುಂದೋಡಿಸಿದ ಹಾಗೆ!"

"ಹೌದಪ್ಪ! ಹೌದು" ಅಂದ ಅಪ್ಪ.

ನಮಗಿದು ವಿಚಿತ್ರ
ಕಂಡಿತು. ಈ
ಹುಡುಗ ಇಪ್ಪತೈದು
ಆದರೂ ಹೀಗೆ ಐದರೆಳೇ ಮಗು
ವಿನ ಹಾಗೆ ಇದೆಲ್ಲ ಹೇಳುವುದು
ಯಾಕೋ ಸರಿ ಕಾಣಲಿಲ್ಲ

ನಮ್ಮಲ್ಲಿ ಒಬ್ಬರು ಹಿರಿಯ
ತಡೆಯಲಾರದೆ
ಹೇಳಿಯೇ ಬಿಟ್ಟರು
ಯಾವುದಾದರೂ ವೈದ್ಯರಿಗೆ
ತೋರಿಸಬಾರದೆ, ಹೋಗಿ
ಬರಬಾರದೇ ಆಸ್ಪತ್ರೆಗೆ ಒಂದು ಸಲ,
ಅಂತ.

ತಲೆ ಹಣ್ಣಾಗುತ್ತಿದ್ದ ಅಪ್ಪ
ನಕ್ಕ, (ಇವನೂ ಹುಚ್ಚನೆ?)
ಹೇಳಿದ: ಹೌದು
ಸ್ವಾಮಿ, ನೀವು ಹೇಳೋದು
ಸರಿ. ಹೋಗಿದ್ದೆವು. ಈಗ
ಬರತಾ ಇದ್ದೇವೆ ವಾಪಸು,
ದೇವರು ದೊಡ್ಡವ, ಕೆಲಸ
ಆಯಿತು. ಇಷ್ಟು ವರ್ಷ
ಇಲ್ಲದೆ ಇದ್ದದ್ದು ಈಗ
ಬಂದಿದೆ,

ಕಣ್ಣು!

ಪರಕಾಯ ಪ್ರವೇಶ

ಒಮ್ಮೆ ನಿತ್ಯಾ
ನಂದ ಸ್ವಾಮಿಗಳು ಅಂತ
ಒಬ್ಬರು

ಹೇಳತಾ ಇದ್ದರು -

ಈ 'ನಾನು' ಅನ್ನುವುದು ವಿಚಿತ್ರ -
ತೊಟ್ಟ ಅಂಗಿ ಕಳಚಿ
ಎಸೆದ ಹಾಗೆ ಈ ನಾನು ಆಗಾಗ
ಬದಲಾಯಿಸಿ ಮೈ, ಕೈ
ಹಿಡಿತಕ್ಕೆ ಸಿಗದೇ ಹಾರುವುದುಂಟು

ನೀವೀಗ ನೀವು ಅಂದು
ಕೊಂಡರೆ ಅದು ನೀವಲ್ಲ, ನಾನು
ನಾನಲ್ಲ.

ಬಹಳ ಚಾಲಾಕಿ ಈ
ನಾನು, ಸಿಗದು ಯಾರ
ಸುತ್ತಿಗೆ ಪೆಟ್ಟಿಗೂ,
ಯಾವ ಬಂಧನ, ಕಟ್ಟಿಗೂ.
ಹಾರುತ್ತ ಇರುವುದು ಮೈ
ಯಿಂದ ಮೈಗೆ, ನೊಣ
ದಂತೆ, ಘನ ಕರಗಿ ಹೊಗೆಯಾದ
ಮೇಣದಂತೆ, ಯಾವ ಕೆಮರದ
ಕಣ್ಣಿಗೂ ಕಾಣದಂತೆ.

ಅವರು ಹೇಳಿದ್ದು
ಕೇಳುತ್ತ ಕೂತರೆ ನಮಗೆ ನಾವೇ
ಖುರ್ಚಿ ಬಿಟ್ಟೆದ್ದು ಅಲೆದಾಡಿದ
ಹಾಗೆ ಬೇತಾಳನಂತೆ, ಯಾವುದೋ
ಮರದ ಕೊಂಬೆಗೆ ತಲೆ
ಕೆಳಗಾಗಿ ತೂಗಾಡಿದಂತೆ
ಆಗುವುದುಂಟು

ಅದು ನಿಜವಾಗಿ ನಾವೊ
ಅಲ್ಲವೋ ಅನ್ನುವುದೂ
ಖಚಿತವಿಲ್ಲ!

ಹೇಳುತ್ತಾರೆ - ನಾನು ಎಣ್ಣೆ
ಯ ಹಾಗೆ ಪಾತ್ರೆಗೆ,
ಚಂದ್ರಮನ ಹಾಗೆ ರಾತ್ರಿಗೆ -
ಶಾಶ್ವತವಲ್ಲ.

ಯಾವ ಕ್ಷಣ
ದಲ್ಲಾದರೂ ಬಿಡಬಹುದು ಈ
ಜೀವ, ಇನ್ನೊಂದನ್ನು
ಹಿಡಿಯಬಹುದು, ಎಲ್ಲ - ಅಂಗಿ
ಕಳಚಿ ಮತ್ತೊಂದು ತೊಟ್ಟ
ಹಾಗೆ, ಹಳೆಯದನ್ನು ಬಿಟ್ಟ
ಹಾಗೆ.

ನಾನು ಎನ್ನುವುದು
ಸರಿದಾಡುತ್ತಲೆ ತಥ್
ಕ್ಷಣ ಪೊರೆ ಕಳಚಿ ಹೊರಬಂದು
ಸರಿದಾಡುತ್ತ ಮುಂದೆ
ಹೋದಂತೆ ಹಾವು.

ಬಿಡಿ ಸ್ವಾಮಿ, ಅವರ ಹಾಗೆ
ಆಗುವುದುಂತೆ, ನಾವು?

ಶಬ್ದ

ಶಬ್ದ
ಬರಿ ಶಬ್ದ ಮಾಡುವುದಕ್ಕೆ, ಅಷ್ಟೆ

ಅಕ್ಷರಗಳ ಸುರುಳಿ, ನೀಟ, ಒತ್ತು, ಗೆರೆ, ಕೋರೆ
ಒಂದರ ಪಕ್ಕ ಒಂದು ಕೂಡಿಸಿ
ಜೋಡಿಸಿ, ತೂಗಿ ನೋಡಿ
ಬರೆದ ಶಬ್ದ - ಹೇಳಬೇಕಾದ್ದು

ಹೇಳದೆ ಬಚ್ಚಿಟ್ಟು ಅಥವ
ಹೇಳಬೇಕಾದ್ದಕ್ಕಿಂತ ಹೆಚ್ಚೇ
ಹೇಳಿ ಶೀಲ ಬಿಚ್ಚಿಟ್ಟು
ಅನಾಹುತ ಮಾಡುವುದು
ಹೊಸತಲ್ಲ.

ಹಕ್ಕಿ ಹಾಡಿಗೆ ಕಿವಿ ತಂಪಾಗಿ ಕೂತ
ಸಂಜೆಯ ಉಲ್ಲಾಸಕ್ಕೆ,
ಅವಳುಟ್ಟ ಶಾಲಲ್ಲಿ ತಡಕಾಡುತ್ತ
ಯಾಚಿಸುವ ಅವನ ಬೇಟಕ್ಕೆ,

ಒಂಭತ್ತು ತಿಂಗಳ ಕನಸು ಕೈಕಾಲು
ತಟಪಟ ಬಡಿಯುತ್ತ ಹೊರ
ಬಂದ ಗಳಿಗೆಯ ಸಂಕಟದ
ಸಂತೋಷಕ್ಕೆ -

ಉಂಟೆ ನಿಮ್ಮಲ್ಲಿ ಒಂದು
ಶಬ್ದ -
ಅಂತ ಕೇಳಿದರೆ ತಲೆ
ಕೊಡವಿತು ಶಬ್ದಕೋಶ

ಛಂದಸ್ಸು, ಪ್ರತಿಮೆ, ಪ್ರಾಸ, ಸಂಕೇತ
ಅಂತ ಏನೇನೋ
ಮಣ್ಣು ಮಸಿ
ಬಳಿದು ತೋರಿಸಬಹುದು, ಕಾವ್ಯ
ಕತೆಗಿತೆ ಗೀಚಿ ಹೇಳಬಹುದು
ಎಂತೆಂಥ ಭಾವನೆಗು
ಒಡ್ಡು ಕಟ್ಟಿ
ನೀರಿಳಿಸಬಹುದು - ಅಂತ
ನೀವಂದುಕೊಂಡರೆ ನಿಲ್ಲಿ, ನೀವು
ಹೇಳಬೇಕಾದ್ದು ಸಾವಿರ ಸಾಲು
ಹೇಳಿದರು ಬಂದಿಲ್ಲವಾದರೆ
ಏನು ಬೆಲೆ ಶಬ್ದಕ್ಕೆ?

ಕಚಕ್ಕೆಂದು ಕತ್ತರಿಸಬೇಕಲ್ಲದೆ
ಕತ್ತಿ ಆಡಿ
ಸುತ್ತಲೇ ಇದ್ದರೆ ಇದೆಯೆ
ಬೆಲೆ, ಯುದ್ಧಕ್ಕೆ?

ಇನ್ನೊಂದು ಅಭಿಜ್ಞಾನ

ಬೆಸ್ತ ಬೀಸಿದ ಬಲೆಗೆ
ಬಿದ್ದ ಓ, ಆ ಚಿನ್ನ
ದಂಥಾ ಬಂಗಾರದ ಮೈ ಮೀನು
ಬೆಸ್ತನ ತಲೆ ಕೆಡಿಸಿತು
ಹುಚ್ಚು ಹಿಡಿಸಿತು

ಅದನ್ನೆತ್ತಿ ಜೋಪಾನವಾಗಿ ತಂದು
"ನೋಡೇ ಇವಳೆ, ಎಂಥಾ ಮೀನು"
ಅಂತ ಮೆಚ್ಚಿಗೆಯ
ಮಾತಾಡಿ, ಕಚಕ್ಕೆಂದು
ಕತ್ತರಿಸಿದ

ಕನಸೋ ಭ್ರಮೆಯೋ
ತಿಳಿಯದ ಹಾಗೆ ವಾಸ್ತವ
ಅವನ ಬೆನ್ನು ಚಪ್ಪರಿಸಿತು
ಹೊಟ್ಟೆಯಲ್ಲಿ ಸಿಕ್ಕಿ
ಹಾಕ್ಕೊಂಡಿದ್ದ ಚಿನ್ನದುಂಗುರ
ಕಣ್ಣು ಕುಕ್ಕಿತು

ಎತ್ತಿ ಮುತ್ತಾಡಿದ
ತುಂಬಾ ಹೊತ್ತು ಗೊತ್ತು
ಗುರಿಯಿಲ್ಲದೆ ಖುಷಿಯಿಂದ
ಸುತ್ತಾಡಿದ

ರಾಜ ಮುದ್ರೆಯ ಚಿನ್ನ
ದುಂಗುರದ ರಂಗು
ಕಂಡು ದಂಗಾದ ಖುಷಿ
ಇಳಿಯಲೇ ಇಲ್ಲ

ಅವೊತ್ತು ರಾತ್ರಿ, ಬೆಸ್ತ
ಪ್ರೀತಿಯ ಮಡದಿಯನ್ನು ಕರೆದು
ಬೆರಳೆಳೆದು ಈ ಚಿನ್ನ
ಸಿಕ್ಕಿಸಿ ಸೆಳೆದು ಅಪ್ಪಿ
ಮುತ್ತಿಟ್ಟು ಖುಷಿಯಾಗಿ ಹಾಡಿದ

ಆಕೆ ಮಾಡಿದ ಮೀನು ಸಾರಿನ
ರುಚಿ ಹೊಗಳಿ ಹೊಗಳೀ
ಹೊಗಳಿ ಕವಿ ಕಾಳಿದಾಸನ
ಹಾಗೆ ಅಧ್ಬುತವಾಗಿ
ಹಾಡಿದ.

ಸುದ್ದಿ

ಭಯಭೀತ ಜನ ಕಂಗಾಲಾಗಿ
ಟೆಲಿಫೋನು ರಿಂಗಣಿ ಸಿದರು
ಪೆನ್ನು - ಪ್ಯಾಡು ಹಿಡಿದು ಪತ್ರ
ಕರ್ತರು ಥಕಥೈ ಕುಣಿದರು
ಪಕಪಕನೆ ಕ್ಯಾಮರಾ ಕಣ್ಣು
ಹೊಡೆಯಿತು

ಟೆಲಿಪ್ರಿಂರುಗುಟ್ಟಿತು
ಸಂಪಾದ
ಕರು, ದನಗಳೆಲ್ಲ ಸಮಾ
ಲೋಚಿಸಿ ತಿದ್ದಿ ತಿದ್ದಿ ಬರೆದರು
ನೂರಾರು ಮಂದಿ ಒಂದೇ ಸವನೆ
ಮೊಳೆ ಜಡಿದರು
ಪ್ರೂಫ್ರೀರು ಕಣ್ಣು, ಕಣ್ಣ
ಉಜ್ಜಿ ಓದಿದರು

ಕಂತೆ ಕಂತೆ ಖಾಲಿಗೆ
ಶಬ್ದ ಸೂತಕ ಮೆತ್ತಿ ಹೊರತಂದರು
ಮುಗಿಬಿದ್ದು ಇಷ್ಟಿಷ್ಟು ಅಂತ ಬಿಸಿಬಿಸಿ
ಇಂಕಿನ ವಾಸನೆ ಹೊಡೆಸಿಕೊಂಡು
ಹುಡುಗರು ಸೈಕಲ್ಲೇರಿ ಸಾಗಿಸಿದರು
ಗೇಟು, ಕಿಟಕಿ, ಸಂದಿ - ಗೊಂದಿ
ಗಳಲ್ಲಿ ತೂರಿಸಿದರು

ಮೂವತ್ತರ ಮುದುಕ
ಆರಾಮಾಗಿ ಎದ್ದು
ಆಕಳಿಸಿ ನೋಡಿದ
ಸಾವಿನ ಸುದ್ದಿ.

ಕ್ರಾಸ್

ಬೆಳ್ಳನೆ ಮುದುಕ ನನ್ನಪ್ಪ
ನನ್ನ ತಾಯಿ ಕಪ್ಪು
ಬೈದಿದ್ದೇನೆ ಇಬ್ಬರಿಗೂ
ಎಂಥಾ ದೊಡ್ಡ ತಪ್ಪು!

"ಹಾಳಾಗಿ ಹೋಗಿ" ಅಂದಿದ್ದೆನೆ?
ಕ್ಷಮೆ ಬೇಡುವೆನೀಗ
ಸಾಯಿರೆಂದು ಶಪಿಸುತ್ತಿದ್ದೆ
ಕಣ್ಣೀರುಗರೆವೆನೀಗ

ಅಪ್ಪ ಸತ್ತ ಬಂಗಲೆಯಲಿ
ವೈಭೋಗ - ಸುಖದ ನಡುವೆ
ಅಮ್ಮ ಮಾತ್ರ ಗುಡಿಸಲಲ್ಲಿ
ಬಿಟ್ಟು ಎಲ್ಲ ಗೊಡವೆ

ಅವರಿಬ್ಬರ ಮಗ ನಾನು -
ಕಪ್ಪಲ್ಲ, ಬಿಳಿಯಲ್ಲ
ಎಲ್ಲಿ ಸಾವು ಬರೆದಿದೆಯೋ
ನನಗೆ ತಿಳಿಯದಲ್ಲ!

(ಲೊಂಗ್ಸ್ತನ್ ಹ್ಯೂಗ್ಸ್ ನ ಕವಿತೆ "ಕ್ರಾಸ್"ನಿಂದ)

ಗುರುತು

ಎಷ್ಟೋ ನೂರು ವರ್ಷದ ಹಿಂದೆ
ಯಾರೋ ಪುಣ್ಯಾತ್ಮ
ನೆಟ್ಟ ಮರ

ಎಷ್ಟೋ ನೂರು ವರ್ಷದ ಮೇಲೆ
ಯಾವನೋ ಪಾಪಾತ್ಮ
ಕಡಿದ

ಮೇಲೆ, ಆ ಮರ
ಅಲ್ಲಿತ್ತು ಅನ್ನುವುದಕ್ಕೆ
ಗುರುತು

ಏನೂ ಇಲ್ಲ, ಮುರಿದ
ಗೂಡುಗಳ ಹೊರತು.

ದಾರಿ

ಇತಿಹಾಸ ಬಗೆವಾಗ ಅಜ್ಜನದೆ ತಲೆಯೋಡು
ಸಿಕ್ಕಿದರೆ ಎಷ್ಟು ಖುಷಿ, ಕಸಿವಿಸಿ, ದುಃಖ
ಹಾಗೆ ಸಿಕ್ಕಿತು ಎರಡು ಹೆಜ್ಜೆ ನನ್ನೆದುರಲ್ಲಿ
ಎಲ್ಲೊ ಹೋದವರದ್ದು, ಗಮ್ಯ - ಕಾಣದ ಮುಖ

ಹೇಗೂ ತಪ್ಪಿದ್ದೇನೆ - ಅನುಸರಿಸಿ ಹೋಗೋಣ
ಗವಿ, ಕೋಟೆ, ನಡುರಸ್ತೆ, ಕಾಡುಮೇಡು
ಅಲೆದರೂ ಮುಗಿಯದ ದಾರಿ - ಸವೆಯದ ಹೆಜ್ಜೆ
ಪ್ರಾಸವಿಲ್ಲದ ಹಾಡು; ಬಿಡದ ಜಾಡು

ನಡೆದೆ ಹೆಜ್ಜೆಯ ಹಿಂದೆ ನರೆವವರೆಗೂ ಗಡ್ಡ
ನಡುವೆ ಸಿಕ್ಕಿದೆಷ್ಟೋ ಕವಲುದಾರಿ
ಹಿಂತಿರುಗಿ ನೋಡಿದರೆ ಇರುಳು, ಕಾಣದ ಭೂತ
ಸಿಗಬಹುದು ಮುಂದೆಲ್ಲೋ ದೀಪಧಾರಿ

ಎದುರು ಮಲಗಿದ ಬೆಟ್ಟ ನನ್ನ ಪೂರ್ವಿಕನಂತೆ
ಪೇರಿಸಿದ ಕನಸುಗಮೂರ್ತ ಶಿಲ್ಪ
ಒಳಗೆಷ್ಟೋ ಮುಚ್ಚಿದ ಗಣಿ, ನೀಲ - ವೈಡೂರ್ಯ ಮಣಿ
ಯಾರು ನೀಡುವರಗೆದು ಕಾಯಕಲ್ಪ?

ಬೆಟ್ಟದ ತುದಿ ಬಂಡೆ. ಜಾರಿದರೆ ಪಾತಾಳ,
ಮೇಲೆ ಮುತ್ತುವ ಮೋಡ, ಮುಗಿಯಿತಿಲ್ಲೆ ಎಲ್ಲೆ?
ಹೆಜ್ಜೆ ಹೇಗಿಡಲಿ ಮುಂದೆ - ಮೇಲೋ ಕೆಳಗೋ -
ಹೇಗೆ ಇತ್ತರು ಅಷ್ಟೆ, ಸೇರುವುದು ಅಲ್ಲೆ.