Saturday, February 21, 2015

ಹಾಯ್ಕುಗಳು: ಬಾಹುಬಲಿ ಮರ

ಎಲೆ ಕಳಚಿ ಸತ್ತಂತೆ ನಿಂತಿರುವ
ಮರದಲ್ಲಿ ಎಂದೋ
ಬಾಳಿದ್ದ ಸಂಸಾರದ ಗುರುತುಗಳು
.
.
ಚಳಿ ಕಳೆದದ್ದೇ ತಡ
ಬರುಬತ್ತಲಾಗಿ ನಿಂತಿದೆ ಈ
ನಾಚಿಕೆಗೆಟ್ಟ ಮರ
.
.
ಏಸುವಿನ ತಲೆಯ ಮುಳ್ಳಿನ
ಕಿರೀಟದಂತೆ ಈ ಬತ್ತಲೆಮರದಲ್ಲಿ
ಗೂಡುಗಳ ಗೊಂಚಲು
.
.
ಮತ್ತೊಂದು ವರ್ಷ ಕಳೆಯಿತೆಂದು
ದಳದಳ ಅತ್ತು ಉದುರಿದ
ಕಂಬನಿಯಂತೆ ಈ ಎಲೆ
.
.
ಪೂನಂ ಪಾಂಡೆಯಂತೆ ಮಾತು ಕೊಟ್ಟು
ಮುರಿಯುವುದಿಲ್ಲ ಎಂದಿದೆ
ಶಿಶಿರದ ಮರ
.
.
ಈ ಶಿಶಿರ ದುಶ್ಶಾಸನ
ಸೆಳೆಸೆಳೆದು ಹಾಕುತ್ತಿದ್ದಾನೆ
ಬಾರಯ್ಯ ವಸಂತ ಬೇಗ
.
.
ತಿರುಪತಿಯಲ್ಲಿ ಸಾಲಾಗಿ ಕೂತ
ತಲೆಗಳಂತೆ
ಶಿಶಿರದ ಮರಗಳು
.
.
ಮರಕ್ಕೆ ಹೆರಿಗೆಬೇನೆ
ಸೂಲಗಿತ್ತಿ ಶಿಶಿರ
ಸೀರೆ ತೆಗೆಸಿದ್ದಾನೆ
.
.
ವಿರಾಗಿ ಬಾಹುಬಲಿಯಂತೆ ನಿಂತಿದೆ
ಮರ ಎನ್ನುವಾಗಲೇ ಕಂಡಿತೊಂದು
ಎಳೆ ಚಿಗುರು
.
.
ಮರದ ಮೈಗೆ ಅಸಾಧ್ಯ ತುರಿಕೆ
ಬಟ್ಟೆ ಕಳಚಿದೆ, ಒಳಗಿಂದ
ಚಿಗುರು ಹುಟ್ಟಿದೆ

Sunday, February 15, 2015

ಉರಿ

ನಾನು ಪುಸ್ತಕ ಸುಡುತ್ತೇನೆಂದಾಗ ತಡೆದ ಧೀರರೇ..ಕೇಳಿಸಿಕೊಳ್ಳಿ

ಈ ಪುಸ್ತಕ ಸುಟ್ಟಿದೆ ನನ್ನ 
ಮನಸ್ಸಿನ ನೆಮ್ಮದಿ
ಸುಟ್ಟಿದೆ ನನ್ನ ಬುದ್ಧಿ
ಭ್ರಮಣಿಸುತ್ತ, ನೆಟ್ಟಗೆ ನಿಲ್ಲಲಾಗದೆ
ಕುಸಿದಿದ್ದೇನೆ ನೂರಾರು ಸಲ
ದ್ವೇಷಿಸುತ್ತ ಬರೆದಿದ್ದೇನೆ ನೂರಾರು ಪುಟ ರದ್ದಿ

ಕಾಡಿದೆ ಈ ಪುಸ್ತಕ ದಿನರಾತ್ರಿ
ಬೇಡದ ಕನಸಾಗಿ, ಮೂಗಿನ ಮೇಲಿನ ಕುರು-ವಾಗಿ
ನನ್ನೊಳಗಿನ ಕುರುಕ್ಷ್ಟೇತ್ರವಾಗಿ 
ಕಂಕುಳಡಿಯ ಬೊಕ್ಕೆಯಾಗಿ
ಪೃಷ್ಟದ ಮೇಲಿನ ಉರಿಹುಣ್ಣಾಗಿ, ಕಾಡಿದೆ
ಕೂಡಲಾಗದಂತೆ

ಈ ಪುಸ್ತಕ - ಬೇತಾಳನಂತೆ ನನ್ನ 
ಮನಸ್ಸಾಕ್ಷಿಯ ಕಾಡಿದಾಗ
ನನ್ನೊಳಗಿನ ಯಾವುದೋ ಮೂಲೆಯಲ್ಲಿ ಅರಳುವ 
ಭಕ್ತಿಯನ್ನು ಚಿವುಟಿ ಹಾಕಿದ್ದೇನೆ; ಒಳ್ಳೆಯತನ
ತರಿದು ಎಸೆದಿದ್ದೇನೆ; ನನ್ನೊಳಗಿನ ಅರ್ಜುನ ಈ
ಸಾವಿರದೆಂಟು ಹೆಂಡಿರ ಗಂಡನನ್ನು ಭಗವಾನ
ನೆಂದು ಒಪ್ಪಿಕೊಳ್ಳುವುದನ್ನು ಸಹಿಸದೆ ಪರಪರ
ಕೆರೆದುಕೊಂಡಿದ್ದೇನೆ, ಬರಿದೆ
ಉರಿದು ಬೂದಿಯಾಗಿದ್ದೇನೆ

ಕೇಳಿದ್ದೀರಾ ಆಗ? ನನ್ನ ಬಗ್ಗೆ ಕರುಣೆ
ತೋರಿದ್ದಿರಾ ಆಗ? ಈ ಪುಸ್ತಕ ನನ್ನ ಅಣುಅಣು
ವನ್ನೂ ಸುಟ್ಟು ಮಿದುಳನ್ನು ಹಪ್ಪಳದಂತೆ
ಕಾಯಿಸುತ್ತಿದ್ದಾಗ ಬಂದಿರಾ ನೀವು?

ಸಾಯುವ ಕಾಲಕ್ಕೆ ತೊಟ್ಟು ನೀರು ಸಿಕ್ಕ
ದಿದ್ದರೂ ಚಿಂತೆಯಿಲ್ಲ; ಬೆಂಕಿ
ಯಲ್ಲಿ ಹವಿಸ್ಸಿನಂತೆ ಅರ್ಪಿಸುತ್ತೇನೆ ಈ ಪುಸ್ತಕ
ಅಣಕಿಸುತ್ತಿದೆ ನನ್ನ; ನನ್ನ ಅಸ್ತಿತ್ವಕ್ಕೇ ಪ್ರಶ್ನೆಯಾಗಿ, ಸವಾಲಾಗಿ
ನಿಂತಿರುವ ಈ ಪುಸ್ತಕವನ್ನು
ಸುಡದೆ ನೆಮ್ಮದಿ ಇಲ್ಲ; ಆಮೇಲೂ ಸಿಕ್ಕುವುದು 
ಖಚಿತವಿಲ್ಲ

ಆದರೂ ಸುಡುತ್ತೇನೆ; ಎಲ್ಲಿ ತನ್ನಿ ಸೀಮೇಎಣ್ಣೆ, ಬೆಂಕಿ
ಕಡ್ಡಿ; ಕೊಳ್ಳಿ; ಡೈನಮೈಟು; ಬಂದೂಕು; ಹಗ್ಗ; ಉಗ್ರಗಾಮಿಗಳ
ಉಗ್ರಾಣದೆಲ್ಲ ಸಾಮಗ್ರಿ. ತನ್ನಿ. ಸುಟ್ಟೇಹಾಕೋಣ.
ಆಮೇಲೆ ಜೀವನ ಇಡೀ ಉರಿದರೂ 
ಪರವಾಯಿಲ್ಲ.

Thursday, January 1, 2015

ಹೊಸವರ್ಷಕ್ಕೊಂದು ಗಪದ್ಯ

ಸತಾಯಿಸುವುದು, ಬೇಜಾರು ಮಾಡುವುದು ಒಳ್ಳೆಯದಲ್ಲ
ಅದೂ ಹೊಸವರ್ಷದ ಮೊದಲ ದಿನ
ಅಂತ ಹೋಗಿದ್ದೆ ಗೆಳೆಯನ ಜತೆ
ಅದೇನೋ ಸುಡುಗಾಡು ಕೆಫೆಗೆ

ಮೊದಲೇ ಹೇಳಿಬಿಡುತ್ತೇನೆ ಕೇಳಿ
ನಾನು ಮೊಸರನ್ನ ಪ್ರಿಯ, ತಂಬುಳಿ ಮಾಡುವುದು ನಿಮಗೆ ಗೊತ್ತಿದ್ದರೂ ಸಾಕು
ವರುಷಾನುಗಟ್ಲೆ ನಿಮ್ಮ ಜತೆ(ಗೇ ಇದ್ದು) ಸುಖಕಷ್ಟಕ್ಕೆ ಎದೆಕೊಡಬಲ್ಲೆ

ಹೋಗಿದ್ದೆ ಅಂದೆನಲ್ಲ, ಮೂರು ಸಾವಿರ ಖರ್ಚು ಇಬ್ಬರಿಗೆ
ಗೊತ್ತಲ್ಲ ಕೋರಮಂಗಲ, ಇಂದಿರಾನಗರಗಳ ಥಕಥಕ ಬೆಳಕಿನಂಗಡಿಗಳಲ್ಲಿ
ಕಾಣುವಂತೇ ಇಟ್ಟಿರುತ್ತಾರೆ ದೊಡ್ಡ ಕತ್ತರಿ, ಕೊಡಲಿ, ಪಿಕಾಸಿ
ನಮ್ಮಂತ ಜನ ಹೋಗಿ ಕೊರಳೊರೆಸಿಕೊಳ್ಳಲಿಕ್ಕೆಂದು

ಆ ಬೆಳಕು, ಥಳಕು, ತೊಡೆ ಕಾಣುವ ಚಡ್ಡಿಯಲ್ಲಿ ಡ್ಯಾಡಿಯ ಜತೆ ಕೂತ
ಮಗಳು, ಸಿಗರೇಟು ಹೊಗೆ ಸುರುಳಿ
ಸುರುಳಿಯಾಗಿ ಬಿಟ್ಟು ಬಾಯ್ ಫ್ರೆಂಡಿನ ಕೊರಳು ಸುತ್ತುವ
ಹುಡುಗಿ, ಅವಳು ಬೀಳುವುದನ್ನೆ ಬಲೆಗೆ -
ಕಾಯುತ್ತ ಜೊಲ್ಲೊರೆಸುತ್ತ ಕ್ಯಾಮರಾ ಆಡಿಸುವ
ಯುವಕ, ಮೇಜೊರೆಸುವ ಹುಡುಗನ ನಡುಗು ಕೈ
ಯಲ್ಲಿ ಚಿಂದಿಯಾದ ಒಂದಷ್ಟು ಹಸಿಕನಸು

ಹ್ಯಾಪೀ ನ್ಯೂ ಇಯರುಗಳ ಬಡಿವಾರ,
ಬಣ್ಣಬಣ್ಣದ ಕಾರ್ಡುಗಳ ಅಂಡುಜ್ಜಿ ತೆಗೆವ ಕ್ಯಾಷಿಯರನ ಯಂತ್ರ,
ಪಾರ್ಕಿಂಗಲ್ಲಿ ಸೆಕ್ಯುರಿಟಿಯ ಆಸೆಗಣ್ಣು, ಹೊರಗೆ
ಬಂದರೆ ಅದೇ ರಗಳೆಟ್ರಾಫಿಕ್ಕು, ಹಾರನ್ನುಗಳ ಜಡಿಮಳೆ,
ಬಂಗಾಳಿ ಗೃಹಿಣಿಯಂತೆ ನಿತ್ಯ ಕೆಂಪುಟ್ಟ ಸಿಗ್ನಲ್ ಕಂಬ
ಪಕ್ಕದವನ ಟಿಂಟೆಡ್ ಗ್ಲಾಸಲ್ಲಿ ಕಾಣಿಸುವ ನನ್ನದೇ ಬೆದರುಬಿಂಬ

ಬಂದೆ ಮನೆಗೆ, ಹೋಗಿದ್ದೆ ಯಾಕೆ ಅನ್ನುವುದೇ
ರೇಜಿಗೆ ಹಿಡಿಸುವಷ್ಟು ಕಂತಿಹೋಗಿದ್ದೆ
ಹೊಸವರ್ಷಕ್ಕೆ ಹಾಗೆಲ್ಲ ಬೇಜಾರು ಮಾಡಿಕೊಳ್ಳುವುದು
ಒಳ್ಳೆಯದಲ್ಲ ಮಾರಾಯ, ಅಂತ ಮನಸ್ಸು
ಹುಳ್ಳಹುಳ್ಳಗೆ ತೇಗುತ್ತ ಸಮಾಧಾನಿಸಿತು

ಹೊಸವರ್ಷ ಅಂದರೆ ನೋಡಿ ಇಷ್ಟೆ -
ಎದೆಮೇಲೆ ಬಿಳಿಬಟ್ಟೆ ಇಳಿಸಿ
ಚಾಕು-ಚಮಚಗಳನ್ನು ಎಡಬಲದಲ್ಲಿ ಹಿಡಿದು
ತಯಾರಾಗಿ ಹಸಿದು ಕೂತವನೊಬ್ಬ
ಅವನೆದುರು ತಟ್ಟೆಯಲ್ಲಿ ಅಡಿಮೇಲು ಮಲಗಿ
ಅರೆದ ಮಸಾಲೆಯಲ್ಲಿ ಮುಳುಗೆದ್ದು ಅಂಡುಸುಟ್ಟು
ಆಕಾಶ ನೋಡುವವನೊಬ್ಬ.

Wednesday, October 29, 2014

ರಾಧೆಯ ಶೋಕ

ಗೋಪಾಲ ಹೇಳು, ಎದೆ ಹಗುರ ಮಾಡು 
ನೀನೋಡುತಿರುವೆ ಎಲ್ಲಿ? 
ಈ ಗೋಪಬಾಲೆ ನಿನಗಾಗಿ ಕಾದು 
ಬತ್ತಿದೆನು ಯಮುನೆಯಲ್ಲಿ 

ನಿನ್ನ ಬೆರಳಾಟವಿಲ್ಲದೆ 
ನಿಟ್ಟುಸಿರಿಟ್ಟಿದೆ ಸೆರಗಂಚು 
ನಿನ್ನ ಕೊಳಲ ದನಿಗದುರುವ 
ಕಿವಿಗಳಿಗೂ ತುಸು ಸಿಹಿ ಹಂಚು 

ಬತ್ತಿದ ಕೊಳದ ಒಡೆದ ತಳದಂತೆ 
ಏತಕೆ ಈ ಮೌನ?
ಕಡಲ ನಡುವಲ್ಲಿ ಹಾಯಿ ಹರಿಯದಿರು 
ಮುಂದುವರೆಸು ಯಾನ. 

ರಾಧೆಯೊಳಗೆ ಹರಿಯುತ್ತಿದೆ ಯಮುನೆ 
ದುಃಖದ ತೆರೆಗಳ ಹೊತ್ತು 
ದುಂಬಿಗಳಿಲ್ಲದ ತೋಟದಲರಳಿದ 
ಹೂವಿಗಷ್ಟೆ ಅದು ಗೊತ್ತು 

ಬರುವನೆಂದು ಬಂದಾನೇ ಎಂದು 
ಕಾದಿರುವಳು ರಾಧೆ 
ಹೇಳದೆ ಹೋಗೇಬಿಡುವೆಯ? ಮರೆತೆಯ?
ನಾನೇಕೆ ಬೇಡವಾದೆ?

ಈ ಬೆಳುದಿಂಗಳು, ಈ ಬೃಂದಾವನ 
ತರುಲತೆಪಕ್ಷಿಯ ಶೋಕ 
ಕಂಡೂ ಕಂಡೂ ಹೋಗೇ ಬಿಡುವೆಯ?
ಕರೆಯಿತಾವ ಲೋಕ?

ಕುಳಿರ್ಗಾಳಿಯ ಕುಲುಮೆಯಲ್ಲಿ 
ಕೂತಿರುವೆನು ಕಲ್ಲಾಗಿ 
ಒಡೆದೆರಡಾದ ಬಿದಿರಿನ 
ಪ್ರೇಮಾಲಾಪದ ಸೊಲ್ಲಾಗಿ. 

(ಒಂದು ಹಳೆ-ಅಸ್ಸಾಮೀಸ್ ನಲ್ಲಿರುವ ಪದ್ಯದ ಭಾವಾನುವಾದ)

Monday, March 31, 2014

ಪದ್ಯ ಬರೆಯುವುದು ಕಷ್ಟವೇನಲ್ಲ

ಪದ್ಯ ಬರೆಯುವುದು ಕಷ್ಟವೇನಲ್ಲ
ಉಸಿರಾಟದಷ್ಟೇ ಸಹಜ
ಇದ್ದರೆ ಸಾಕು ಒಂದಷ್ಟು ನೀರೂ ಗಾಳೀ
ತೇಲುತ್ತ ಹೋಗುವುದು ಜಹಜ

ಅನ್ನುತ್ತಾರೆ ತಿಳಿದವರು ಬೇಕಾಗುತ್ತಂತೆ
ಅಲಂಕಾರ, ಛಂದಸ್ಸು, ಪ್ರಾಸ
ಓದಬೇಕಂತೆ ಅಡಿಗ, ಲಂಕೇಶ,
ತಿರುಮಲೇಶ, ಕುಮಾರವ್ಯಾಸ

ಓದಿಲ್ಲ ನಾನು ಇವರ್ಯಾರನ್ನೂ
ಭಯಪಡಿಸಬೇಡಿ ನನ್ನ!
ಬಿಳಿಹಾಳೆ, ನೊರೆಕಾಫಿ ಅಷ್ಟೇ ಇದೆ
ಎಳೆದುಬಿಡಬೇಡಿ ಪೆನ್ನ!

ಕಿಟಕಿ ಬಳಿ ಕೂತಾಗ, ಎದುರು ಮನೆ ಹುಡುಗಿ
ಹರಿಸಿದರೆ ಕುಡಿಗಣ್ಣ ನೋಟ
ಸ್ಫೂರ್ತಿಶಾಯಿಯು ತುಂಬಿ ಎದೆಭಿತ್ತಿ ಮೇಲೆ
ಶುರು ನನ್ನ ಪದಗಳೋಟ!

ಚಿಕ್ಕದಾಗಿದ್ದರೆ ಕಾವ್ಯ, ಒಳ್ಳೆಯದು, ಮಡಚಿ
ರಾಕೆಟ್ಟು ಮಾಡಲು ಸುಲಭ
ಹಾರಿಬಿಟ್ಟಾಗ ನೇರ ಅವಳ ಬಾಲ್ಕನಿಗೆ ಹೋಗಿ
ಬಡಿದರಷ್ಟೇ ತಾನೇ ಲಾಭ?

ಬರೆಯುವೆನು ನಾನು ತುಂಬಾ ಸರಳ
ಶಬ್ದಗಳಲ್ಲಿ ನನ್ನ ಪದ್ಯ
ಕಾನ್ವೆಂಟು ಹುಡುಗಿ ಅವಳಿಗದು
ಅರ್ಥವಾದರೆ ಸಾಕು ಸದ್ಯ!

Tuesday, December 4, 2012

ಅಜ್ಜಿ ಹೋದ ದಿನಕೊರಡುಗಳ ನಡುವೆ ಕೊರಡಾಗಿ 
ಮಲಗಿ, ಮುತ್ತಿಟ್ಟ 
ಬೆಂಕಿಗೆ ಚಿಟಚಿಟನೆ ನಗು 
ನಗುತ್ತ ಹೊಗೆಯಾಗಿ ಹಾರಿ ಹೋದರೆ 
ಮೇಲೆ?

ಇಲ್ಲಿಲ್ಲ, ಇರಲಿಕ್ಕಿಲ್ಲ, ಇಲ್ಲೇ 
ಇದ್ದಾರೆ - ಈ ಅಜ್ಜಿ, ನೆಲ 
ಕ್ಕಂಟಿ, ಬೇರಿಳಿಸಿ ಆಳ ಆಳಕ್ಕೆ ಹೂತು 
ಯಾರೂ ಎತ್ತಲಾರದಷ್ಟು ಹಟದಲ್ಲಿ ಕೂತು 
ಇರುತ್ತಾರೆ ಈ ನೆಲದಲ್ಲಿ -
ಅನಿಸುತ್ತದೆ 

ಅಜ್ಜಿ - ನೆಟ್ಟು ಬೆಳೆಸಿದ ಸಾಲು 
ಮರಗಳ ಎಲೆ ಎಲೆಯ ಲೆಕ್ಕ 
ಕೂಡ ತಿಳಿದವರು, ಆ ಹೂವು 
ಹಣ್ಣು, ಹೀಚುಕಾಯಿಗಳ ಜೊತೆ ಪಟ್ಟಾಂಗ 
ಹೊಡೆದವರು, ಅದರ ಮೇಲೆ ಕೂತ
ಹಕ್ಕಿಯ ಹಾಡು ಕೇಳುತ್ತ ಕಣ್ಣೀರು ಕರೆದವರು 
ಮರ - ಹಕ್ಕಿ - ಹೂವು - ಹುಲ್ಲಿನ ಸಹಸ್ರ 
ವಂಶ ಹಡೆದವರು 

ನಾವೆಲ್ಲಾ ನಮ್ಮ ರೆಕ್ಕೆ ಬಲಿಸಿ 
ಕೊಂಡು, ಬಾಯಿಗೆ ಹೊಸಹೊಸ ಭಾಷೆ 
ಕಲಿಸಿಕೊಂಡು, ಪರಂಗಿ ನೆಲಗಳನ್ನು ಒಲಿಸಿಕೊಂಡು 
ಹೋದರೂ ಯಾರಯಾರ 
ಅಂಗಿಗೋ ತೇಪೆ ಹೊಲಿಯುತ್ತ ,
ನಮ್ಮ ಘನಹುದ್ದೆಗಳ ಪೀಪಿ ಉಲಿಯುತ್ತ,
ಸೊಂಟದಡಿ ಕೊಬ್ಬಾಗಿ ಬಲಿಯುತ್ತ 
ಉಬ್ಬಸ ಬಂದು 
ಮಾತ್ರೆ ನುಂಗಿ ನೀರು ಕುಡಿಯುತ್ತೇವೆ 
ಮೇಲೊಂದಿಷ್ಟು ವ್ಯಾಯಾಮ - ಏರೋ 
ಬಿಕ್ಸು, ಉರುಳುತ್ತೇವೆ.

ಅವರೇ ಬೆಳೆಸಿದ ಮಾವು 
ಅವರ ಜೊತೆ ಸುತ್ತೂ ಮಲಗಿ 
ಅವರ ಜೊತೆಗೇ ಹೊಗೆ 
ಯಾಗಿ ಮೇಲೇರುತ್ತ ಗಾಳಿಗೆ 
ಬೆರೆತಾಗ ಉಮ್ಮ 
ಳಿಸಿ ಬಂತು ನೂರೊಂದು ನೆನಪು...

Saturday, June 30, 2012

ಒಮ್ಮೆ ನೋಡು ಇತ್ತ

ಬರೆಯಲು ಬಾರದು, ಬರೆಯಲೂ ಬಾರದು ನೋಡಿ
ಒಂದಕ್ಷರ ಕೂಡ ಇಂಥ ಗಳಿಗೆ
ಇಳಿದಿಳಿದು ಲಾವದ ಹಾಗೆ ಹೆಪ್ಪುಗಟ್ಟಿದ ನೋವು
ತಣ್ಣಗೆ ಕೊರೆವಾಗ ಒಳಗೆ

ಮಾತು ಬಲಹೀನ, ಮೌನ -  ಹಬ್ಬುತ್ತಿದೆ
ಏನು ಮಾಡಲಿ ಆರ್ತಜೀವ
ಬೆಂಕಿನಾಲಗೆ ಚಾಚಿ ಸುಡುವ ಪ್ರೇಮದ ಕಾವು,
ಒಳಗೆಲ್ಲ ಶೂನ್ಯಭಾವ.

ನನ್ನ ಪದಗಳಿಗಿಲ್ಲಿ ಯಾವ ಬೆಲೆ, ಏನು ನೆಲೆ,
ಭಗ್ನ ಪಂಜರದ ಮೂಕಪಕ್ಷಿ
ಉಸುಕಿನರಮನೆ ಮೇಲೆ ಅಲೆಗಳೆಬ್ಬಿಸಿ ಹೋದ
ರುದ್ರ ಸಾಗರವೊಂದೆ ಸಾಕ್ಷಿ

ಕತೆ,ಕವಿತೆ,ಲಾವಣಿಗೆ ಸಿಕ್ಕುವಂಥಹುದಲ್ಲ
ಗಾಳದೆರೆಹುಳು ; ಸುತ್ತ ನೀರು
ಹಬ್ಬಿ ಹರಡಿದ ದುಃಖವನ್ನು ತಲೆಯಲಿ ಹೊತ್ತು
ಕೆಸರಲುಬ್ಬಸ ಪಡುವ ಬೇರು

ಎಳೆದ ಹಗ್ಗದ ಗುರುತು, ಇಳಿವ ನೆತ್ತರ ಮರೆತು
ಓಡುವಂತಿದೆ ಎಳಸು ಕಾಲು
ಅಪ್ಪಿ ಹಿಡಿದರೆ ಸಾಕು, ಉಬ್ಬಿ ಬರುವುದು ಕೊರಳು
ಊಡದಿರು ಮಾತ್ರ ವಿಷಹಾಲು

ಕಣ್ಣ ತೊಟ್ಟಿಂದ ತೊಟ್ಟಾಗಿ ಇಳಿದಿದೆ ನೀರು
ಸುಡುವ ಕೆನ್ನೆಯನೊಮ್ಮೆ ಒರೆಸು
ಗರಿ ಸುಟ್ಟ ಗುಬ್ಬಚ್ಚಿಯಂತೆ ಬೇಡುವೆ ನಿನ್ನ
ಯಾಕಿನ್ನೂ ಕಲ್ಲು ಮನಸು?