Tuesday, June 22, 2010

ಒಂದು ಗಳಿಗೆಯ ಆ ಸುಖ

ನಿಮಗೆ ಗೊತ್ತಿದೆಯೋ ಕಾಣೆ - ಈ ಬೀಡಾಡಿ
"ವಿಡೋ ಜೇಡ" ಕತೆ
ಸುರತ ಸುಖ ಸುಖ ಅನ್ನುವ
ರಸಿಕರೆಲ್ಲ ಕೇಳಿ ಈ ವ್ಯಥೆ

ಪಚ್ಚೆ ಕಾಡಿನ ದಟ್ಟ ಹಸಿರಿನ
ಗಿಡಗಂಟಿಗಳ ನಡುವೆ
ಬೆದೆ ಬಂದು ಕೂತ ಕನ್ನೆಯ
ಸುತ್ತ ಉಚ್ಚಿಷ್ಟದೊಡವೆ

ಅವಳ ಅಂಗಾಂಗ ಮಾಟ, ಚೆಲುವಿನ
ರೂಪ, ಕಾಮಾಸಕ್ತ ಭಂಗಿ
ಕಂಡು ಕೆರಳಿದ ಗಂಡು ಊರ್ಣನಾಭರ
ಮನಸೆಲ್ಲ ಪಂಚರಂಗಿ

ಈ ಹೆಣ್ಣ ಬಯಕೆಯ ಗರ್ಭ
ಗುಡಿಯಲ್ಲಿ ಧ್ವಜ ನೆಡಲು ಸಿದ್ಧ
ರಾಗಿ ನಿಂತ ಗಂಡೆಲ್ಲ ಮುಗಿಬಿದ್ದು
ಮಾಡುವವು ತಮ್ಮೊಳಗೆ ಯುದ್ಧ

ಗೆದ್ದ ವೀರಾಧಿವೀರ ಹಾರಿ ಬಂದೊತ್ತಿ
ಇವಳ ಅಂಡಕ್ಕೆ ಮುದ್ರೆ
ಎದ್ದೋಡುವ ಮೊದಲೆ ಹಿಡಿವಳು ಗಬಕ್ಕನೆ
ಕತ್ತ, ಈ ಕಾಳಿ - ಭದ್ರೆ!

ಮೈಯಲ್ಲಿ ಇಳಿಯದ ಬಿಸಿ, ಹಸಿವಿನ ಹಸಿ
ನೆನಪು, ಪ್ರೆಮದಭಿಷೇಕ
ಎಲ್ಲ ಇನ್ನೂ ಇದ್ದ ಹಾಗೆಯೆ ಅವನು ಹೆಣ
ಯಾರಿಗಿದೆ ಯಾವ ಶೋಕ!

ಕೊಂದ ಮಿಂಡನ ಮೇಲೆ ಇಟ್ಟ
ಪ್ರೀತಿಯ ತತ್ತಿ ಒಡೆದು
ಹೊರಬಂದ ಸಾವಿರ ಮರಿಗಳೆಲ್ಲ
ಅಪ್ಪನ ರಕ್ತ ಕುಡಿದು

ಕೊಬ್ಬುತ್ತಾವೆ, ಬೆದೆ ಬಂದು ಸಾಯುತ್ತಾವೆ
ಮುಂದೊಮ್ಮೆ ಹೆಣ್ಣುಗಳಿಗೆ
ಯಾಕಿಂಥ ಜನ್ಮ ಅಂತ ಅನಿಸೋದಿಲ್ಲ
ವಲ್ಲ ಈ ಗಂಡುಗಳಿಗೆ,
ಒಂದು ಗಳಿಗೆ!

Monday, June 21, 2010

ಸ್ಮೃತಿ - ಗತಿ

ಊರುಗೋಲು, ಶಾಲು,
ಸವೆದ ಚಪ್ಪಲಿ, ಟೋಪಿ,
ಕೊಟ್ಟಣ, ಕೋವ , ನಶ್ಯ
(ಬೇಡ ಚಟಗಳ ವಿಷ್ಯ ..)

ಚರಕಾಪರಕ ಚರಕ, ನಾಇನ್ಟೀನ್ ಥರ್ಟಿಯ
ಉಪ್ಪು, ಕಪ್ಪು
ಕಟ್ಟಿನ ದಪ್ಪ ಗಾಜಿನ ಕನ್ನಡಕ,

ತಿಥಿ ಗಳಿಗೆ ಕರಣ ನಕ್ಷತ್ರ
ಪಂಚಾಂಗದರವತ್ತು ಸಂವತ್ಸರ

ಎಳೆಯುತ್ತ ಕಾಲ ನಡೆವ ಗಡಿಯಾರ
ಪೆಂಡುಲಮ್ಮಿನ ಹಾಗೆ ತೂಗುವ ಈಸಿಚೇರು
ಚೋಮನಿಗೆ ಧರ್ಮಾರ್ಥ ಕೊಟ್ಟ ದನ,ಕರು
ಹಿಡಿದ ಕೈಗೆ ಹಿಡಿ ತುಂಬ ಕೊಟ್ಟ ಚಿಲ್ಲರೆ

ಕಾಶಿಯ ಕವಡೆ, ಯಾರದೋ
ದವಡೆ, ರುದ್ರಾಕ್ಷಿ,
ಮಾಯ ಮಾಟದ ಮಂತ್ರ ಬರೆದಿಟ್ಟ ತಾಳೆಗರಿ,
ಕೊಪ್ಪರಿಗೆ ಉಪ್ಪರಿಗೆ,
ನಿತ್ಯ ನೈವೇದ್ಯ ಉಂಡು
ಮಲಗೋ ದೇವರು.

ದೇಶಾವರಿ ನಗುವ ಹಲ್ಲು
ಸೆಟ್ಟು, ಹುಳ
ತಿಂದ "ರಾಷ್ಟ್ರಮತ", ರಾಷ್ಟ್ರಪಿತ
ನಕ್ಕ ಫೋಟೋ ಹಿಂದೆ ಗುಬ್ಬಚ್ಚಿ ಸಂಸಾರ
ಉದುರಿಸೋ ಪುಕ್ಕ,
ಕಾಮತರ ಹೋಟೆಲಲ್ಲಿ ಬರೆದಿಟ್ಟ ಲೆಕ್ಕ

ಎಲ್ಲ ಇವೆ
ಅಜ್ಜನಿಲ್ಲ.

ವಾಸನೆ

ಕಾಲ ಕೆಟ್ಟಿತೋ ಅಂತ
ಕೊಟ್ಟಣ ಕುಟ್ಟುವ ಬಚ್ಚು ಬಾಯಜ್ಜಿ
ಕಂಡು ಕಸಿವಿಸಿಯಾದ ಟೀವಿ
ತುಂಬಿದ ಊರ್ಮಿಳೆಯ ಎದೆ

ಹಿಡಿದಿಡಲಾರದೆ ಉದ್ರೇಕ
ಚಿತ್ತ, ಪಟ್ಟೆಯುಟ್ಟ
ಹುಡುಗನ ಕಣ್ಮುಂದೆ ದೇವಿಯ ಪಟ

ಗಾಯತ್ರಿ ನೂರೆಂಟು ಎಣಿಸಿ ಮಣಿ
ಯುವ ಮೈ
ಯಲ್ಲಿ ಪರಪರ ತುರಿಸುವ
ಪರಂಪರೆ ಗಾಯ

ಪುರುಷಸೂಕ್ತದಡಿ
ಕಾಮಸೂತ್ರ

ಶೆಟ್ಟರ ಹೋಟೆಲು ಮಾಂಸದ
ಕೋಳಿ ಟೇಬಲ್ಲಲ್ಲಿ
ಕೂತು ಜಗಿದರೆ ಜಗ್ಗಿ
ನಕ್ಕು "ಧರ್ಮಾಧರ್ಮ
ಹಾರುವ
ಕುಲಾಂತರಿ ಹುಳವೇ - ಹಣೆಮುದ್ರೆ
ಅಳಿಸಿಲ್ಲವಲ್ಲೋ!" ಅಂದಾಗ

ಎದ್ದು ಬಂದ ಬಿಕ್ಕಳಿಕೆ
ಮುಕ್ಕಳಿಸಿದರೆ ಹೋಗದ
ವಾಸನೆ,

ಬಾಯಿ, ಗಂಟಲು, ಕರುಳು...

ಮಕರದ ಮಳೆ

ಬಂತು ಮಳೆ ಬರಬಾರದಿದ್ದರೂ ಜನವರಿಗೆ
ಹಾಡುತಿವೆ ಹಕ್ಕಿಗಳು ದೂರದಲ್ಲಿ
ಮೂರುದಿನಗಳ ಬಳಿಕ ಮಿಂದ ನೀರೆಯ ಹೆರಳ
ಹಾಗೆ ಮೊಲ್ಲೆಯ ಮಾಲೆ ಪಾತಿಯಲ್ಲಿ

ನೋಡಿದರೆ ಆಕಾಶ ಶುಭ್ರ ಹಾಲಿನ ಬಣ್ಣ
ಎಲ್ಲಿ ಹೋಯಿತು ಮೋಡ ತಿಳಿಯಲಿಲ್ಲ
ಹತ್ತಾದರೂ ಹೊತ್ತು ಕಣ್ಣು ತೆರೆಯದ ಸೂರ್ಯ
ಮುಗಿಲ ಹಾಳೆಗೆ ಬಣ್ಣ ಬಳಿಯಲಿಲ್ಲ

ಮಾಮರದ ಹೂವುಗಳು ಚಿಗುರಿ ನಿಂತಿವೆ ಮೇಲೆ
ಸಂಕ್ರಾಂತಿಯಲ್ಲೆಳೆದ ತೇರಿನಂತೆ
ತೊತ್ತಿಕ್ಕುತಿವೆ ಆಲದಿಂದ ಒಂದೊಂದೆ ಹನಿ
ಸರದಿಂದ ಮುತ್ತಮಣಿ ಜಾರಿದಂತೆ

ನಾದಲೀಲೆಯ ಅಲೆಗಳಲ್ಲಲ್ಲಿ ಕೇಳುತಿವೆ
ಜೀವಸೆಲೆಯಾಡುತಿದೆ ಹಳೆಯ ಬೇರು
ರಸ್ತೆಯುದ್ದಾನುದ್ದ ಕಸ, ಕೆಸರು, ಅಂಟುನೆಲ
ಕೊಚ್ಚಿ ಹೋಗಿದೆ ಸಂತೆ, ಒದ್ದೆ ಊರು

ಮಳೆ ಬಂದ ಭಯದಲ್ಲಿ ಕೊಡೆ ಹುಡುಕಹೋದವರು
ಇಂಥ ಸೊಬಗಿನ ಬೆಳಗು ನೋಡಲಿಲ್ಲ
ನೆಲದೊಡಲು ಒಡೆದು ಹೊರಬಂದ ಮಣ್ಣಿನ ಗಂಧ
ಏಸಿ ಕಾರಿನ ಒಳಗೆ ಹಾಯಲಿಲ್ಲ.

(ನಾನು ಶಾಲೆ ಕಲಿಯುತ್ತಿದ್ದಾಗ ಬರೆದ ಪದ್ಯ. ಒಂದು ಸಲ ಜನವರಿಯಲ್ಲಿ ಮಳೆ ಬಂದು ಹೋದ ಮೇಲೆ, ಮನೆಯ ಟೆರೆಸಿನಲ್ಲಿ ಕೂತು ಬರೆದದ್ದು..)

Wednesday, June 16, 2010

ನೇಪಥ್ಯದಲ್ಲಿ

ಈ ಕಿರೀಟ ಒಪ್ಪುತ್ತೋ ನಿನಗೆ ಅರ್ಜುನ
ಇಲ್ಲವಾದರೆ ಕೊಡು, ಹಾಕಲಿ ಕೌರವ.
ಮಾತು ಎತ್ತರಿಸು ಕೇಳುವ ಹಾಗೆ ಸಭೆಗೆ, ಆದರೆ
ಅರಚದಿರು, ಕಳೆಯದಿರು ಗೌರವ

ಏನಮ್ಮ, ಮೂರು ಸೀರೆ ಬಿಗಿದುಟ್ಟೆಯ?
ದುಶ್ಶಾಸನ ಸೆಳೆಯುವಾಗ ಎಚ್ಚರ
ನೀನೂ ಅಷ್ಟೇ, ನಿಧಾನ ಮಹರಾಯ, ತಪ್ಪಿದರೆ
ಕೊಡಬೇಕಾಗುತ್ತೆ ನಾನು ಉತ್ತರ!

ಭೀಮಸೇನ, ನಿನ್ನ ಗಧೆ ನಿಧಾನ, ಹೊಡೆದು
ಚಚ್ಚಿಬಿಟ್ಟೀಯ ತಲೆ ಗಿಲೆ!
ನಿನ್ನ ಹೊಡೆತಕ್ಕೆ ಬಿದ್ದವರು ಎದ್ದಿಲ್ಲವಾದರೆ
ತೆರಬೇಕಾಗುತ್ತೆ ಭಾರೀ ಬೆಲೆ!

ಕೊಳಲು, ನವಿಲಗರಿ, ಜರಿಶಾಲು, ಚಕ್ರ
ಹೋದಂತೇ ಬರಬೇಕು ವಾಪಸು
ಯುದ್ಧದುತ್ಸಾಹದಲ್ಲಿ ಮರೆಯದ ಹಾಗೆ ಬಿಲ್
ಬಾಣ - ಪಾರ್ಥನಿಗೂ ಜ್ಞಾಪಿಸು!

ಈ ಧರ್ಮ ಮಾತು ಮರೆಯುತ್ತಾನೆ ಆಗಾಗ
ಸಹಕರಿಸು ಸಹದೇವ ಜೊತೆಗೆ
ಆನೆ ಸತ್ತ ವಿಚಾರ ಕೂಗಿಬಿಡು ನೀನೆ
ಭಂಗ ಬರದಂತೆ ಕತೆಗೆ

ನಿನ್ನ ಗಡ್ಡದ ಮೇಲೆ ಗಮನವಿಡು ಭೀಷ್ಮನೆ,
ಧ್ರೋಣನೆ, ನಿನ್ನ ಧೋತರ
ಕಳಚಿಕೊಳ್ಳದ ಹಾಗೆ ಕತ್ತಿ ಮೆಲ್ಲನೆ ಬೀಸು
ತೋರದಿರು ಕೊಲ್ಲುವ ಆತುರ

ಕಟ್ಟಿಕೊಂಡೆಯ ಕರ್ಣಕುಂಡಲದ ಚೀಲ
ಗೊತ್ತಲ್ಲ ಬಿಚ್ಚಿ ತೆಗೆವ ಬಗೆ?
ಸತ್ತ ಸೈನಿಕರೆಲ್ಲ ಎದ್ದೋಡಿ ಬರಬೇಕು
ರಂಗದಲ್ಲೆದ್ದಾಗ ಹೊಗೆ.

ಗೆಳೆಯರೇ, ಚೆನ್ನಾಗಿ ನಟಿಸಿ ಗೌರವ ತನ್ನಿ,
ಚಪ್ಪಾಳೆಯೇ ನಮ್ಮ ಬಹುಮಾನ.
ಜನ ಮೆಚ್ಚಿ ಕೊಂಡಾಡಿ ಕೊಡುವ ನೆಮ್ಮದಿಗಿಂತ
ಬೇಕೇನು ಕಾಸು ಸಮ್ಮಾನ?