Wednesday, October 29, 2014

ರಾಧೆಯ ಶೋಕ

ಗೋಪಾಲ ಹೇಳು, ಎದೆ ಹಗುರ ಮಾಡು 
ನೀನೋಡುತಿರುವೆ ಎಲ್ಲಿ? 
ಈ ಗೋಪಬಾಲೆ ನಿನಗಾಗಿ ಕಾದು 
ಬತ್ತಿದೆನು ಯಮುನೆಯಲ್ಲಿ 

ನಿನ್ನ ಬೆರಳಾಟವಿಲ್ಲದೆ 
ನಿಟ್ಟುಸಿರಿಟ್ಟಿದೆ ಸೆರಗಂಚು 
ನಿನ್ನ ಕೊಳಲ ದನಿಗದುರುವ 
ಕಿವಿಗಳಿಗೂ ತುಸು ಸಿಹಿ ಹಂಚು 

ಬತ್ತಿದ ಕೊಳದ ಒಡೆದ ತಳದಂತೆ 
ಏತಕೆ ಈ ಮೌನ?
ಕಡಲ ನಡುವಲ್ಲಿ ಹಾಯಿ ಹರಿಯದಿರು 
ಮುಂದುವರೆಸು ಯಾನ. 

ರಾಧೆಯೊಳಗೆ ಹರಿಯುತ್ತಿದೆ ಯಮುನೆ 
ದುಃಖದ ತೆರೆಗಳ ಹೊತ್ತು 
ದುಂಬಿಗಳಿಲ್ಲದ ತೋಟದಲರಳಿದ 
ಹೂವಿಗಷ್ಟೆ ಅದು ಗೊತ್ತು 

ಬರುವನೆಂದು ಬಂದಾನೇ ಎಂದು 
ಕಾದಿರುವಳು ರಾಧೆ 
ಹೇಳದೆ ಹೋಗೇಬಿಡುವೆಯ? ಮರೆತೆಯ?
ನಾನೇಕೆ ಬೇಡವಾದೆ?

ಈ ಬೆಳುದಿಂಗಳು, ಈ ಬೃಂದಾವನ 
ತರುಲತೆಪಕ್ಷಿಯ ಶೋಕ 
ಕಂಡೂ ಕಂಡೂ ಹೋಗೇ ಬಿಡುವೆಯ?
ಕರೆಯಿತಾವ ಲೋಕ?

ಕುಳಿರ್ಗಾಳಿಯ ಕುಲುಮೆಯಲ್ಲಿ 
ಕೂತಿರುವೆನು ಕಲ್ಲಾಗಿ 
ಒಡೆದೆರಡಾದ ಬಿದಿರಿನ 
ಪ್ರೇಮಾಲಾಪದ ಸೊಲ್ಲಾಗಿ. 

(ಒಂದು ಹಳೆ-ಅಸ್ಸಾಮೀಸ್ ನಲ್ಲಿರುವ ಪದ್ಯದ ಭಾವಾನುವಾದ)

Monday, March 31, 2014

ಪದ್ಯ ಬರೆಯುವುದು ಕಷ್ಟವೇನಲ್ಲ

ಪದ್ಯ ಬರೆಯುವುದು ಕಷ್ಟವೇನಲ್ಲ
ಉಸಿರಾಟದಷ್ಟೇ ಸಹಜ
ಇದ್ದರೆ ಸಾಕು ಒಂದಷ್ಟು ನೀರೂ ಗಾಳೀ
ತೇಲುತ್ತ ಹೋಗುವುದು ಜಹಜ

ಅನ್ನುತ್ತಾರೆ ತಿಳಿದವರು ಬೇಕಾಗುತ್ತಂತೆ
ಅಲಂಕಾರ, ಛಂದಸ್ಸು, ಪ್ರಾಸ
ಓದಬೇಕಂತೆ ಅಡಿಗ, ಲಂಕೇಶ,
ತಿರುಮಲೇಶ, ಕುಮಾರವ್ಯಾಸ

ಓದಿಲ್ಲ ನಾನು ಇವರ್ಯಾರನ್ನೂ
ಭಯಪಡಿಸಬೇಡಿ ನನ್ನ!
ಬಿಳಿಹಾಳೆ, ನೊರೆಕಾಫಿ ಅಷ್ಟೇ ಇದೆ
ಎಳೆದುಬಿಡಬೇಡಿ ಪೆನ್ನ!

ಕಿಟಕಿ ಬಳಿ ಕೂತಾಗ, ಎದುರು ಮನೆ ಹುಡುಗಿ
ಹರಿಸಿದರೆ ಕುಡಿಗಣ್ಣ ನೋಟ
ಸ್ಫೂರ್ತಿಶಾಯಿಯು ತುಂಬಿ ಎದೆಭಿತ್ತಿ ಮೇಲೆ
ಶುರು ನನ್ನ ಪದಗಳೋಟ!

ಚಿಕ್ಕದಾಗಿದ್ದರೆ ಕಾವ್ಯ, ಒಳ್ಳೆಯದು, ಮಡಚಿ
ರಾಕೆಟ್ಟು ಮಾಡಲು ಸುಲಭ
ಹಾರಿಬಿಟ್ಟಾಗ ನೇರ ಅವಳ ಬಾಲ್ಕನಿಗೆ ಹೋಗಿ
ಬಡಿದರಷ್ಟೇ ತಾನೇ ಲಾಭ?

ಬರೆಯುವೆನು ನಾನು ತುಂಬಾ ಸರಳ
ಶಬ್ದಗಳಲ್ಲಿ ನನ್ನ ಪದ್ಯ
ಕಾನ್ವೆಂಟು ಹುಡುಗಿ ಅವಳಿಗದು
ಅರ್ಥವಾದರೆ ಸಾಕು ಸದ್ಯ!