Wednesday, December 22, 2010

ನಿಮಿರದ್ದು

ಸೃಜನ ಶೀಲ
ತೆಯ ಬಗ್ಗೆ ಭಾಷಣ ಕುಟ್ಟಿ ಎದುರಿದ್ದ
ವರ ತಲೆ ಕೆಡಿಸಿ ಬಂದ ದಿನ

ಸಂಜೆ ಕೂತರೆ ಬಿಳಿ ಹಾಳೆ
ಯೆದುರಿಗೆ ಪೆನ್ನು ಓಡಲೇ
ಇಲ್ಲ, ಒಂದಾದರೂ ಸಾಲು ಹೊಳೆಯದೆ ಕಕ್ಕಾ
ಬಿಕ್ಕಿ, ಮೊಂಡಾಗಿ ಕೂತೆ.

ಹಳೆಯದಷ್ಟೂ ಕೃತಿ ಕಾವ್ಯ ಲೇಖನ ರಾಮಾಯಣ
ಎಳೆದು ರಾಶಿ ಹಾಕುತ್ತ ಪುಟ ಪುಟ ಪುಟ
ತಿರುಗಿಸಿ ಹೊಸ ವಿಷಯಕ್ಕೆ
ಅಥವಾ ಹಳೆಯದನ್ನೇ ಮತ್ತೆ ತಿರುಗಿಸಿ
ಹೊಳೆಯಿಸುವುದಕ್ಕೆ ಪಟ್ಟ ಸಂಕಟವೆಲ್ಲ
ನಿಷ್ಫಲ

ವಾಗಿ ಬೇಜಾರಾಗಿ ಅವಳು ಮಾಡಿಟ್ಟ
ಕಾಫಿ ತಣ್ಣಗೆ ಗಟಗಟ ಕುಡಿದೆ.

ಗೆಳೆಯರ ಜೊತೆ ಮಾತು, ಹರಟೆ ಹೊಡೆದರೂ
ಅಲ್ಲಿ, ಈರುಳ್ಳಿ ಮೆಣಸು ಜೀರಿಗೆ ಮಾತು
ಕತೆಯಿತ್ತೆ ವಿನಃ
ಬರೆಯುವಂಥಾದ್ದು ಸಿಗಲಿಲ್ಲ

ದುಗುಡ ಏರಿತು ಜ್ವರದಲ್ಲಿ ಬಿದ್ದ
ಕನಸಲ್ಲಿ ಬಂದ ಸಾವಿನ ಹಾಗೆ.
ಇಷ್ಟು ವರ್ಷಗಳ ಅಹಮ್ಮಿಗೆ ಬಿದ್ದ
ಈ ಪೆಟ್ಟು, ಎಂಥಾ ಘಾತ
ಅನ್ನಿಸಿ, ಪಿಚ್ಚೆನಿಸಿ ರೋಷ ಉಕ್ಕೇರಿತು.

ಬೆಣ್ಣೆ, ಬಾದಾಮಿ, ಹಾಲು, ಕಾಮ
ಕಸ್ತೂರಿ, ಗಜ್ಜರಿ - ಎಲ್ಲ ಮುಕ್ಕಿದೆ
ಕಾಡುಕುದುರೆಯ ಉಚ್ಚೆ ವಾಸನೆ
ಯನ್ನೂ ತಾಳುತ್ತ ಚೂರ್ಣ ನೆಕ್ಕಿದೆ

ಆದರೂ, ಪೃಷ್ಟದ ಕೀಲು ಮುರಿದ
ಒಂಟೆಯ ಹಾಗೆ, ಮಲಗಿ
ಯೇ ಇತ್ತು; ಪೌರುಷ
ಕಳೆದ ಅರ್ಜುನ ಬೃಹನ್ನಳೆಯಾಗಿ
ಹುಳ್ಳಗೆ ಕೂತಂತೆ ಅಳ್ಳಳ್ಳಾಗಿ
ತೆವಳಿತು ಸಿಂಬಳದ ಹುಳ.

"ಇದರ ಮನೆ ಹಾಳಾಗ" ಅಂತ
ಶಪಿಸಿ ಶತಪಥ ಹಾಕಿ ಮಂಕಾಗಿ
ಮಲಗಿ, ಎದ್ದು, ಕನವರಿಸುತ್ತ ಬಿಕ್ಕಿದೆ.
ಎರಡೇ ಎರಡು ಸಾಲು ಕೂಡ
ಹೊಳೆಯದೆ ಬೋಳಾಗಿ
ಬಳಲುತ್ತ ಕನಲಿದೆ.

ನೋಡಿ, ಸಕ್ಕರೆ, ಬೀಪಿ, ಸಂಧಿ
ವಾತ, ಹೃದಯಾಘಾತ - ಯಾವುದೂ
ಈ ಖಾಲಿತನದಂಥ ಮರ್ಮಾಘಾತ
ದೆದುರು ಏನೂ ಅಲ್ಲ, ಅಂತ
ಒಪ್ಪುತ್ತೀರಿ,
ಅನುಭವಿಸಿದ್ದರೆ..

2 comments:

  1. ಅರೆ! ನಿಜಕ್ಕೂ ಚೆನ್ನಾಗಿದೆ. ಯಾಕೆ ಬ್ಲಾಗ್ ಬರೆಯೋದನ್ನು ನಿಲ್ಲಿಸಿದ್ರಿ? ದಯವಿಟ್ಟು ಮುಂದುವರಿಸಿ.-b.m.basheer

    ReplyDelete