Wednesday, June 16, 2010

ನೇಪಥ್ಯದಲ್ಲಿ

ಈ ಕಿರೀಟ ಒಪ್ಪುತ್ತೋ ನಿನಗೆ ಅರ್ಜುನ
ಇಲ್ಲವಾದರೆ ಕೊಡು, ಹಾಕಲಿ ಕೌರವ.
ಮಾತು ಎತ್ತರಿಸು ಕೇಳುವ ಹಾಗೆ ಸಭೆಗೆ, ಆದರೆ
ಅರಚದಿರು, ಕಳೆಯದಿರು ಗೌರವ

ಏನಮ್ಮ, ಮೂರು ಸೀರೆ ಬಿಗಿದುಟ್ಟೆಯ?
ದುಶ್ಶಾಸನ ಸೆಳೆಯುವಾಗ ಎಚ್ಚರ
ನೀನೂ ಅಷ್ಟೇ, ನಿಧಾನ ಮಹರಾಯ, ತಪ್ಪಿದರೆ
ಕೊಡಬೇಕಾಗುತ್ತೆ ನಾನು ಉತ್ತರ!

ಭೀಮಸೇನ, ನಿನ್ನ ಗಧೆ ನಿಧಾನ, ಹೊಡೆದು
ಚಚ್ಚಿಬಿಟ್ಟೀಯ ತಲೆ ಗಿಲೆ!
ನಿನ್ನ ಹೊಡೆತಕ್ಕೆ ಬಿದ್ದವರು ಎದ್ದಿಲ್ಲವಾದರೆ
ತೆರಬೇಕಾಗುತ್ತೆ ಭಾರೀ ಬೆಲೆ!

ಕೊಳಲು, ನವಿಲಗರಿ, ಜರಿಶಾಲು, ಚಕ್ರ
ಹೋದಂತೇ ಬರಬೇಕು ವಾಪಸು
ಯುದ್ಧದುತ್ಸಾಹದಲ್ಲಿ ಮರೆಯದ ಹಾಗೆ ಬಿಲ್
ಬಾಣ - ಪಾರ್ಥನಿಗೂ ಜ್ಞಾಪಿಸು!

ಈ ಧರ್ಮ ಮಾತು ಮರೆಯುತ್ತಾನೆ ಆಗಾಗ
ಸಹಕರಿಸು ಸಹದೇವ ಜೊತೆಗೆ
ಆನೆ ಸತ್ತ ವಿಚಾರ ಕೂಗಿಬಿಡು ನೀನೆ
ಭಂಗ ಬರದಂತೆ ಕತೆಗೆ

ನಿನ್ನ ಗಡ್ಡದ ಮೇಲೆ ಗಮನವಿಡು ಭೀಷ್ಮನೆ,
ಧ್ರೋಣನೆ, ನಿನ್ನ ಧೋತರ
ಕಳಚಿಕೊಳ್ಳದ ಹಾಗೆ ಕತ್ತಿ ಮೆಲ್ಲನೆ ಬೀಸು
ತೋರದಿರು ಕೊಲ್ಲುವ ಆತುರ

ಕಟ್ಟಿಕೊಂಡೆಯ ಕರ್ಣಕುಂಡಲದ ಚೀಲ
ಗೊತ್ತಲ್ಲ ಬಿಚ್ಚಿ ತೆಗೆವ ಬಗೆ?
ಸತ್ತ ಸೈನಿಕರೆಲ್ಲ ಎದ್ದೋಡಿ ಬರಬೇಕು
ರಂಗದಲ್ಲೆದ್ದಾಗ ಹೊಗೆ.

ಗೆಳೆಯರೇ, ಚೆನ್ನಾಗಿ ನಟಿಸಿ ಗೌರವ ತನ್ನಿ,
ಚಪ್ಪಾಳೆಯೇ ನಮ್ಮ ಬಹುಮಾನ.
ಜನ ಮೆಚ್ಚಿ ಕೊಂಡಾಡಿ ಕೊಡುವ ನೆಮ್ಮದಿಗಿಂತ
ಬೇಕೇನು ಕಾಸು ಸಮ್ಮಾನ?

No comments:

Post a Comment