Thursday, July 1, 2010

ನೆನಪಿನ ಮಳೆ

ಭೋರೆಂದು ಘೀಳಿಡುವ ಮಳೆಯಲ್ಲಿ ಬಂದವರ
ನೆನೆದ ಅಂಗಿಗಳಲ್ಲಿ ಅವನ ನೆನಪು
ಅವರಿಳಿಸಿ ಮುಚ್ಚಿಟ್ಟ ಕಡುಕಪ್ಪು ಕೊಡೆಯಲ್ಲಿ
ಇಳಿವ ಹನಿ ಹನಿಯಲ್ಲಿ ಅವನ ನೆನಪು

ಉಪಚಾರ ಮಾತಿನಲಿ, ಕೈ ಕುಲುಕು, ನೋಟದಲಿ,
ಬಿಸಿ ಕಾಫಿ ಕಪ್ಪಿನಲಿ ಅವನೇ
ಉಟ್ಟ ಜರಿಸೀರೆಯಲಿ ಹೊಳೆವ ಬಣ್ಣಗಳಲ್ಲಿ
ಬಿಡಿಸಿಟ್ಟ ಚಿತ್ತಾರ ಅವನೇ

ಅವರು ಕೇಳಿದರೆಂದು "ಯಾವ ಮೋಹನ ಮುರಳಿ
ಕರೆಯಿತೋ"ಎಂದಾಗ ಬಂದ
ಇಟ್ಟ ವೀಣೆಯ ಮೇಲೆ ನಡುಗು ಬೆರಳುಗಳಿಂದ
ತಂತಿ ಮೀಟಲು ಹಾಡು ತಂದ

ಹೂವು ಹಣ್ಣಿನ ರಾಶಿ, ಪೂಜೆ, ಆರತಿ, ಬೆಳಕು,
ಗಂಧ - ಅಕ್ಷತೆಯಲ್ಲಿ ಅವನು
ಅವರಿವರ ಮಾತು ನಗೆ ಚಪ್ಪಾಳೆ ಸದ್ದಿನಲಿ
ಕಳೆದು ಹೊದಾನೇನೋ ಅವನು

ಸಿಕ್ಕಾದ ಮೊಲ್ಲೆ ಜಡೆ, ಬಿಚ್ಚಿಟ್ಟ ಸೀರೆ,ಸರ
ಉಂಗುರದ ಬೆರಳಲ್ಲಿ ಅವನ ನೆನಪು
ತಿಂಗಳಾಗಲು ತುಂಬಿ ತೊಳೆದುಹೋಗುವ ಬಸಿರು
ಬಚ್ಚಿಟ್ಟ ಉಸಿರಿನಲಿ ಅವನ ನೆನಪು..

No comments:

Post a Comment