Friday, July 9, 2010

ವಿಧಿಯ ಹಾಡು

ಹುಟ್ಟಿದ ಮೂರು ಗಳಿಗೆಯಲಿ
ಬರುತ್ತಾನೆ ತುಂಟ
ಬಡವನಿಗೆಂತೋ ಹಾಗೇನೆ
ಧನಿಕನಿಗೂ ಅವ ನೆಂಟ

ಭವಿಷ್ಯ ಎಂಬುದು ಬಳಪದ ಕಡ್ಡಿ
ಹಣೆ ಅವನ ಸ್ಲೇಟು
ಗೀಚುವನಲ್ಲಿ ಅಡ್ಡಾದಿಡ್ಡಿ
ಅಕ್ಷರ, ಚಿತ್ರ, ಗೀಟು

ಬಡವನ ನಾಲಿಗೆಗೂ ತಾಗಿಸುವನು
ಕೆಲವೊಮ್ಮೆ ಹನಿಜೇನು
ಧನಿಕನ ಮೀಸೆಗು ಮಣ್ಣು ಮೆತ್ತುವನು
ನೆಟ್ಟಗಾಗಿಸುವ ಗೂನು

ಹರಿಶ್ಚಂದ್ರನಿಗೆ ಮಸಣ
ಶಕುಂತಲೆಗೆ ವಿರಹ
ಸೀತೆಗೆ ಕಾಡು - ಎಲ್ಲಕು ಕಾರಣ
ಅವನು ಬರೆದ ಹಣೆಬರಹ.

(ನನ್ನ "ಮೃಗ ಚೆಲುವೆ" ನಾಟಕದ ಹಾಡು)

No comments:

Post a Comment