Friday, July 9, 2010

ನಾಂದಿ ಪದ್ಯ (ಬೆನಕನ ಸ್ತುತಿ)

ಕಂಡೀರೇನೆ ಎಂಥಾ ಮಗನ ಪಡೆದಳೆಂದು ಪಾರ್ವತಿ!
ಇಂಥ ಮಗನ ಕೂರಿಸಿಟ್ಟು ಎತ್ತಿರೆಲ್ಲ ಆರತಿ.

ನರಮಾನವ ಹೊಟ್ಟೆ ಮೇಲೆ ಆನೆ ತಲೆಯು ಕೂತಿದೆ
ಬೀಸಲೆರಡು ಅತ್ತ ಇತ್ತ ಕಿವಿಯು ಮೊರದ ಹಾಗಿದೆ

ದೊಡ್ಡ ಹಣೆಯ ಆಚೆ-ಈಚೆ ಪುಟ್ಟ ಕಣ್ಣು ಪಿಳಿಪಿಳಿ
ಡೊಳ್ಳು ಹೊಟ್ಟೆ ಬಿರಿಯದಂತೆ ಹಾವು ಬಿಗಿದ ಸರಪಳಿ

ಇನ್ನೂ ಬೇಕು, ಇನ್ನೂ ಬೇಕು ಎನುವ ಹೊಟ್ಟೆಬಾಕಾ
ಅಗಿದು ತಿನಲು ಮಾತ್ರ ನಿನಗೆ ಒಂದೇ ದಂತ ಸಾಕ?

ನೀನು ಹೊರಟು ನಿಂತರೆ ಸುತ್ತಿಬರಲು ಮೂಲೋಕ
ಜೀವಭಯದಿ ನಡುಗುತಾನೆ ನಿನ್ನ ಗೆಳೆಯ ಮೂಷಿಕ!

ಕಾದಿರುವರು ನಿನಗಾಗಿಯೇ ಎರಡು ಹೆಣ್ಣು, ಒಡೆಯನೆ
ಹೇಗವರಿಗೆ ಸೊಂಡಿಲಲ್ಲಿ ಮುತ್ತನಿಡುವೆ ಮಡೆಯನೆ!

ಬೇಡಿದವರ ಇಷ್ಟದಂತೆ ನಡೆವೆಯಂತೆ ಹೇರಂಭ!
ನಿನ್ನ ಹೊಗಳುಸೇವೆಯಿಂದ ನಮ್ಮಾಟದ ಆರಂಭ

ಹೇರಂಭಾ, ಏಕದಂತ, ಗೌರೀಸುತ, ಬೆನಕಾ
ನಮ್ಮ ತಪ್ಪು ನುಂಗಿಕೊಂಡು ಕಾಯೋ ಕೊನೆ ತನಕ

ನಿನಗು, ನಿನ್ನ ಹಡೆದವರಿಗು ಮಾಡುತ್ತೀವಿ ನಮನ
ಇರಲಿ ನಮ್ಮಾಟದಲ್ಲಿ ನಿನ್ನ ಪ್ರೀತಿ, ಗಮನ!

(ನನ್ನ ಹೊಸ ನಾಟಕ "ಚಮತ್ಕಾರ"ದ ನಾಂದಿ ಪದ್ಯ)

No comments:

Post a Comment