Friday, January 19, 2024

ಅಯೋಧ್ಯಾಗಮನ

ಹೊರಟೆವು ನಾವು, ಬರುವಿರ ನೀವು

ರಾಮನ ಮನೆಗೆ ನಮ್ಮ ಜತೆ?

ದಾರಿಯ ಖರ್ಚಿಗೆ ಬೇಕಾದಷ್ಟಿದೆ

ಹಾಡಲು ಹೇಳಲು ರಾಮಕಥೆ


ದಂಡಕೆ ದಂಡು ಹಾರಿದೆ ಬಾನಿಗೆ

ಗಿಳಿ ಗೊರವಂಕ ಗುಬ್ಬಚ್ಚಿ

ಹದ್ದಿನ ಹಾದಿಯ ಕೋಳಿಯೂ ಹಿಡಿದಿದೆ

ಸೇರುವುದೆಂತೋ ಪಾಪಚ್ಚಿ!


ಕಾಡಿನ ಸಭೆಯಲಿ ಸೇರಿವೆ ಜಿಂಕೆ

ಮೊಲ ನರಿ ಅಜ ಗಜ ಶಾರ್ದೂಲ

ದಿಬ್ಬಣ ಹೊರಟಿವೆ ರಾಮನ ಕಡೆಗೆ

ಹಾಡಿವೆ ಕೋಗಿಲೆ ಹಿಮ್ಮೇಳ


ಸಾವಿರ ಸಂಖ್ಯೆಯ ವಾನರ ಹಿಂಡು

ಉತ್ಸವ ಹೊರಟಿದೆ ಉತ್ತರಕೆ

ಮರದಲ್ಲಾಡುತ ಜಿಗಿಜಿಗಿದೋಡುತ

ಕುಪ್ಪಳಿಸುತ ಬಾನೆತ್ತರಕೆ


ರಾಮ ನಡೆದ ಗೋದಾವರಿಯಲ್ಲಿ,

ಚಿತ್ರಕೂಟದ ಕಾಡಿನಲಿ,

ಪಂಚವಟಿಯ ಜಲ ನೆಲ ಬಾನಲ್ಲಿ,

ಬೆಸ್ತರ ಬೇಡರ ಹಾಡಿಯಲಿ


ಎಲ್ಲೆಲ್ಲೂ ಹೊಸ ಸಂಭ್ರಮ ತುಂಬಿದೆ

ಹೊರಡುವ ಗಡಿಬಿಡಿ ಎಲ್ಲ ಕಡೆ

ಕೆದರಿದ ಕೂದಲ ಬಾಚಿದ ಜಾಂಬವ,

ಶಬರಿಯು ಹೆಣೆದಳು ಎರಡು ಜಡೆ


ಮಾವಿನ ತೋರಣ ಕಟ್ಟಿತು ಕರಡಿ,

ಅಳಿಲಿನ ಬಾಯಲಿ ನೆಲಗಡಲೆ,

ಹೊರಟವು ಹೂಗಳು ಬುಟ್ಟಿಯ ತುಂಬ

ಕೇಳಿತು ನಾರು: ಜೊತೆಗಿರಲೆ?


ಸರಯೂ ಜಲಚರ, ಮತಂಗ ಗಿರಿಚರ

ಎಲ್ಲವು ಹೊರಟಿವೆ ಜತೆಯಲ್ಲಿ

ಲಂಕೆಯ ವನಕೂ ಮಿಥಿಲೆಯ ಜನಕೂ

ಜಾಗವುಂಟು ಈ ಕಥೆಯಲ್ಲಿ


ರಾಮನ ಹೊಸಮನೆಯಂಗಳ ತುಂಬಿದೆ,

ಕ್ರೌಂಚವ ಹಿಡಿದಿಹ ವಾಲ್ಮೀಕಿ,

ಸುತ್ತಲ ಖಗಮಿಗವೆಲ್ಲಾ ಹಾಡಿದೆ -

ಜಯ ಬೋಲೋ ರಘುರಾಮ ಕೀ! 

ಸೀತಾರಾಮ ಹನುಮಾನ ಕೀ!

No comments:

Post a Comment