Tuesday, January 30, 2024

ಸುಂದರಕಾಂಡ

ಪಾರಾವಾರವ ದಾಟಿ ಸುದೂರದ 

ದ್ವೀಪಕೆ ಹಾರಿದ ಹನುಮ

ಸೀತೆಯ ಕಾಣುತ ನೆನೆದನು ಮನದಲಿ: 

"ಪಾವನವಾಯಿತು ಜನುಮ!"


ಸೂಜಿಯು ಕರುಳನು ಅರೆಯುವ ಹಾಗೆ 

ವನಚರ ಗೋಳಿಡುತಿತ್ತು

ದುಗುಡದ ಹಬೆಯಲಿ ಬಾಡಿದ ತಾವರೆ 

ಮೌನದಿ ಊಳಿಡುತಿತ್ತು


ಅಶೋಕವನದಲಿ ಶೋಕದ ಮಡುವಲಿ 

ಹೊರಟಿತು ವಿಷಾದಗೀತೆ;

ಹಾಡಿನ ಕಣ್ಣನು ಒರೆಸಿದ ಹನುಮ 

ಬೇಡಿದ: "ಅಳದಿರು ಮಾತೆ!


ಬರುವನು ಬರುವನು ದಶರಥಪುತ್ರನು 

ಮರೆಯದೆ ನಿನ್ನಯ ಬಳಿಗೆ

ದಶಕಂಠಗಳನು ತರಿಯದೆ ಬಿಡನು, 

ಬೇಗನೆ ಬರುವುದು ಘಳಿಗೆ!"


ಬಾಳೆಯ ತೋಟಕೆ ನುಗ್ಗಿದ ಮರಿಗಜ 

ಮಾಡಿದ ದೊಂಬಿಯ ಹಾಗೆ

ಅಶೋಕವನ ಪುಡಿಗುಟ್ಟಿದ ಹನುಮ, 

ಬೆದರಿತು ಪಿಕ ಬಕ ಕಾಗೆ


ಬಂದೇ ಬಂದಿತು ರಕ್ಕಸಸೇನೆ 

ಬೋನಲಿ ತುಂಬಲು ಕೋತಿಯನು

ತಲೆಗಳೊ ತರಗೆಲೆ ತೆರದಲಿ ಬಿದ್ದವು 

ತಾಳದೆ ವಾನರಘಾತವನು


ಕೊನೆಗೂ ರಾವಣಪುತ್ರನೆ ಬಂದ, 

ಮಾಯಾಪಾಶದ ಕುಣಿಕೆಯ ತಂದ

ವಾನರಮುಖ್ಯನ ಬಂಧಿಸಿ ರಾವಣ-

ನೆದುರಲಿ ನಿಲ್ಲಿಸಿ ನಿಂದ


ಕೇಳಿದ ದಶಮುಖ: "ತೋಟಕೆ ನುಗ್ಗಿದ 

ಕೀಟಲೆ ಕೋತಿಯು ನೀನೊ?

ತರಿಯಲೆ ತಲೆಯನು, ಸಿಗಿಯಲೆ ಎದೆಯನು, 

ಸೆರೆಮನೆಗೆಸೆಯಲೇನೊ?


ಇರುವೆಯ ಜಜ್ಜಲು ಗದೆಯನ್ನೆತ್ತಲೆ! 

ನಿನಗಿದೊ ಕ್ಷುಲ್ಲಕ ಶಿಕ್ಷೆ -

ಬಾಲಕೆ ಹಚ್ಚುವೆ ಬೆಂಕಿಯ, ಹೋಗೆಲೊ 

ಬದುಕಿಕೊ ಬೇಡುತ ಭಿಕ್ಷೆ!"


ಎನ್ನಲು ರಾವಣ, ತಂದರು ಎಣ್ಣೆಯ, 

ಹೊಸೆಯಲು ಬಟ್ಟೆಯ ತುಂಡು,

ಬೆಳೆಯಲುತೊಡಗಿದ ಬಾಲವನಳೆಯಲು 

ಬಂದಿತು ರಕ್ಕಸ ದಂಡು!


ಬೆಳೆಯುತ ಅರಮನೆ ಮೀರಿತು, ಬೀದಿಗೆ 

ಬಂದಿತು, ಕೇರಿಯ ತುಂಬ!

ಹಬ್ಬಿತು ಉದ್ದನೆ, ಇಳಿಸಿತು ಬಟ್ಟೆಯ 

ಸುತ್ತುವ ಅಸುರರ ಜಂಬ!


ಬಾಲಕೆ ಬಟ್ಟೆಯ ಸುತ್ತಲು ಅರಮನೆ 

ಗೋದಾಮುಗಳೇ ಬರಿದು,

ಗಾಣದ ಮನೆಗಳ ಉಗ್ರಾಣಗಳೇ 

ಮುಚ್ಚಿದವೆಣ್ಣೆಯ ಸುರಿದು!


ಹಚ್ಚಿದ ಬೆಂಕಿಯ ನಾಲಗೆ ನೆಕ್ಕಿತು 

ಲಂಕೆಯ ಮನೆಮಠ ಓಣಿಗಳ

ಅರಮನೆ-ಬಂಗಲೆ, ಒಳಮನೆ-ಪಡಸಲೆ, 

ದ್ವೀಪದ ಬೆಸ್ತರ ದೋಣಿಗಳ


ಹೊಗೆಯಲಿ ಮುಳುಗಿಸಿ ಲಂಕಾಪುರಿಯನು 

ವಾಯುಪುತ್ರ ಹನುಮಾನ

ಅಯ್ಯೋ ಎಂದನು ಕಳವಳಿಸುತ್ತ, 

ಹುಟ್ಟಲೊಂದು ಅನುಮಾನ - 


ಲಂಕೆಯನೇನೋ ಬೂದಿಯ ಮಾಡಿದೆ, 

ಜಾನಕಿ ಕತೆ ನಾ ಜಾನೆ!

ಬೆಂಕಿಯೆ ಸುಡುವುದೆ ಬೆಂಕಿಯ? ಬೆಂಕಿಯ 

ಮಗಳಲ್ಲವೆ ಆ ಜಾಣೆ!


ಎನ್ನುತ ವಾನರ ತಾಳಿದ ನೆಮ್ಮದಿ, 

ಲಂಕೆಯ ಸುಟ್ಟ ಮೇಲೆ

ಹಚ್ಚಿದ ಕಿಡಿಯಲಿ ನಗರವೆ ನೆಲಸಮ-

ವಾಯಿತು, ಬಾಲದ ಲೀಲೆ!


ಕೆಣಕಲು ಬಂದರೆ ಬಿಡುವನೆ ಹನುಮ, 

ಕೊಡುವನು ಉತ್ತರ ತಕ್ಕ!

ಪೈಸೆಗೆ ಪೈಸೆಯ ಚುಕ್ತಾ ಮಾಡುವ, 

ತಪ್ಪನು ಬಡ್ಡಿಯ ಲೆಕ್ಕ!


ಲಂಕಾಪುರಿಯಲಿ ಬೆಂಕಿಯ ತಾಂಡವ-

ವಾಡಿದ ಹನುಮನು ಕೊನೆಗೆ

ಶರಧಿಯ ನೀರಲಿ ಬಾಲವನಾರಿಸಿ 

ಬಂದನು ರಾಮನ ಕಡೆಗೆ


ಒಂದೇ ಇರುಳಲಿ ಪರನೆಲ ಮುಟ್ಟಿ 

ಸೀತೆಗೆ ಮುದ್ರಿಕೆಯಿತ್ತು,

ರಕ್ಕಸ ಸೊಕ್ಕನು ಮುರಿದ ಹನುಮಬಲ 

ರಾಮನಿಗಷ್ಟೇ ಗೊತ್ತು


ನಿನ್ನುಪಕಾರಕೆ ಕೊಡಲೇನಿಲ್ಲದ 

ಬಡವನೆಂಬ ಅಳು ನುಂಗಿ

ರಾಮ ಕೊಟ್ಟ ಆಲಿಂಗನಭಾಗ್ಯಕೆ 

ಕರಗಿಹೋದ ಭಜರಂಗಿ!

No comments:

Post a Comment