Tuesday, January 30, 2024

ಲೋಕಸಂಸಾರಿ

ಬರುವರೀಗ, ಬಂದರೇನೊ! 

ಜಗಲಿಯಾಚೆ ನಿಂದರೇನೋ!

ಹೋಗಿಬರುವೆನಮ್ಮ ನೋಡಲೊಮ್ಮೆ

ಕಳಿಸೆಯಾ?


ಹನುಮ ಹರಿಣ ವೈನತೇಯ

ಅರುಣಮಗನ ಬಳಗ ಬಂತು

ಚಿಣ್ಣಿದಾಂಡು ತಂದರೇನೋ,

ನನ್ನ ಇಳಿಸೆಯಾ?


ಬೆಳಗನೆದ್ದು ಹಲ್ಲನುಜ್ಜಿ

ಅಮರ ಹೇಳಿ ಸ್ನಾನ ಮುಗಿಸಿ

ವಿಠ್ಠಲನಾಮ ಸ್ಮರಣೆ ಮಾಡಿ

ಚಾಮಿ ಮಾಡಿದೆ


ತಿಲಕವಿಟ್ಟು ಗಂಧ ಪೂಸಿ

ತಲೆಯ ಬಾಚಿ ಜುಟ್ಟುಕಟ್ಟಿ

ಅಮ್ಮ ನೀನು ನನ್ನನೆತ್ತಿ

ಮಮ್ಮು ಉಣಿಸಿದೆ


ಹಾಲು ಕುಡಿದೆನಮ್ಮ, ಬಿಳಿಯ 

ಮೀಸೆ ಬಂದಿತಮ್ಮ, ಅದನು 

ಕಂಡು ದಾಸಿ ಬಳಗವೆಲ್ಲ 

ಬಿದ್ದುನಕ್ಕರು 


ಅವರ ಮಕ್ಕಳೆಲ್ಲ ಜೊತೆಗೆ

ಬಂದುಕೂಡಿ ಆಟವಾಡೆ

ಬಿಲ್ಲುಬಾಣ ಹೂಡಿದಾಗ

ಮರೆಯ ಹೊಕ್ಕರು


ಅಮ್ಮ ನನ್ನ ಗೆಳೆಯರೆಲ್ಲ

ಬರುವುದುಂಟು, ಬಂದರೇನೋ, 

ಶಬರಿ ಸೀಬೆ ತಂದಳೇನೋ,

ನೋಡಿ ಬರುವೆನು


ಬಟ್ಟೆಯುಟ್ಟು ಮುದ್ರೆ ತೊಟ್ಟು

ವಂಕಿ ವಾಲೆ, ಹಣೆಗೆ ಬೊಟ್ಟು

ಎಲ್ಲ ತೊಟ್ಟೆ, ಮರೆಯಲಿಲ್ಲ

ಕೊರಳ ಸರವನು


ಇಷ್ಟು ಚಂದ ಮಾಡಿಕೊಂಡು

ಅವರ ಮುಂದೆ ಹೋದರವರು

ಗುರುತು ಹಿಡಿವುದುಂಟೆ ನನ್ನ,

ರಾಜಮಾತೆಯೆ!


ರಾಜಮನೆಯ ಭೋಗಭಾಗ್ಯ

ಮೀರಿಬೆಳೆದ ಸ್ನೇಹಭಾಗ್ಯ -

ಸರಳ ಪದವ ಹಾಕಿ ಬರೆದ

ಭಾವಗೀತೆಯೆ!


ಕಾಡಹಣ್ಣು ತಂದರಮ್ಮ, 

ಕಾಡಜೇನು ಕೊಟ್ಟರಮ್ಮ, 

ಬಾಡದಂಥ ಹೂವ ಮಾಲೆ

ಕೊರಳ ಸುತ್ತಲು


ರೆಂಬೆಕೊಂಬೆ ಹತ್ತಿ ಇಳಿದು

ನದಿಯಲೀಜಿ ಗುಡ್ಡವೇರಿ

ಆಟವಾಡಿಕೊಂಡು ಬರುವೆ

ಸಂಜೆಗತ್ತಲು


ರಾಜಮಗನು ಮರೆಯಲಾರೆ

ಹೆಗಲ ಹೊಣೆಯ ಮೀರಲಾರೆ

ಉಚಿತವಲ್ಲದಂಥ ಕೆಲಸ

ನಾನು ಮಾಡೆನು


ಬೆಟ್ಟ ಬಯಲು ಹತ್ತಿಳಿದರು

ಬಟ್ಟೆ ಕೊಳೆಯ ಮಾಡೆನಮ್ಮ

ಒಮ್ಮೆ ಹೋಗಿ ಆಡಿಬರುವೆ

ಮತ್ತೆ ಬೇಡೆನು


ಒಜ್ಜೆಯಲ್ಲವೇನು ಗೆಜ್ಜೆ

ಸೊಂಟಪಟ್ಟಿ ಎದೆಯ ಪದಕ

ಗಂಧ ಕಸ್ತೂರಿ ತಿಲಕ

ಕಂಠಿ ಕಾಡಿಗೆ?


ಬಿಚ್ಚಿ ಗಳಿಗೆ ಹೋಗಿಬರುವೆ

ಅವರ ಕೂಡೆ ಸಮಯಕಳೆದು

ಸಮಯಮೀರೆ ಓಡಿಬರುವೆ

ಮರಳಿ ಗೂಡಿಗೆ


ರಾಜಗೃಹದ ನೀತಿನಿಯಮ

ಹಳ್ಳಿಗಾಡ ಜನಜೀವನ

ಎರಡೂ ಬೇಕು, ನೋಡಬೇಕು

ಲೋಕಜೀವಿ ನಾ


ಎಂದು ಮಾತೆಗೆರಗಿ ನಮಿಸಿ

ಬಂದು ಬಳಗ ಸೇರಿಕೊಂಡು

ಅಳಿಲ ಬೆನ್ನ ನೇವರಿಸಿದ

ರಘುಕುಲೋತ್ತಮ!

No comments:

Post a Comment