Wednesday, May 26, 2010

ದಾರಿ

ಇತಿಹಾಸ ಬಗೆವಾಗ ಅಜ್ಜನದೆ ತಲೆಯೋಡು
ಸಿಕ್ಕಿದರೆ ಎಷ್ಟು ಖುಷಿ, ಕಸಿವಿಸಿ, ದುಃಖ
ಹಾಗೆ ಸಿಕ್ಕಿತು ಎರಡು ಹೆಜ್ಜೆ ನನ್ನೆದುರಲ್ಲಿ
ಎಲ್ಲೊ ಹೋದವರದ್ದು, ಗಮ್ಯ - ಕಾಣದ ಮುಖ

ಹೇಗೂ ತಪ್ಪಿದ್ದೇನೆ - ಅನುಸರಿಸಿ ಹೋಗೋಣ
ಗವಿ, ಕೋಟೆ, ನಡುರಸ್ತೆ, ಕಾಡುಮೇಡು
ಅಲೆದರೂ ಮುಗಿಯದ ದಾರಿ - ಸವೆಯದ ಹೆಜ್ಜೆ
ಪ್ರಾಸವಿಲ್ಲದ ಹಾಡು; ಬಿಡದ ಜಾಡು

ನಡೆದೆ ಹೆಜ್ಜೆಯ ಹಿಂದೆ ನರೆವವರೆಗೂ ಗಡ್ಡ
ನಡುವೆ ಸಿಕ್ಕಿದೆಷ್ಟೋ ಕವಲುದಾರಿ
ಹಿಂತಿರುಗಿ ನೋಡಿದರೆ ಇರುಳು, ಕಾಣದ ಭೂತ
ಸಿಗಬಹುದು ಮುಂದೆಲ್ಲೋ ದೀಪಧಾರಿ

ಎದುರು ಮಲಗಿದ ಬೆಟ್ಟ ನನ್ನ ಪೂರ್ವಿಕನಂತೆ
ಪೇರಿಸಿದ ಕನಸುಗಮೂರ್ತ ಶಿಲ್ಪ
ಒಳಗೆಷ್ಟೋ ಮುಚ್ಚಿದ ಗಣಿ, ನೀಲ - ವೈಡೂರ್ಯ ಮಣಿ
ಯಾರು ನೀಡುವರಗೆದು ಕಾಯಕಲ್ಪ?

ಬೆಟ್ಟದ ತುದಿ ಬಂಡೆ. ಜಾರಿದರೆ ಪಾತಾಳ,
ಮೇಲೆ ಮುತ್ತುವ ಮೋಡ, ಮುಗಿಯಿತಿಲ್ಲೆ ಎಲ್ಲೆ?
ಹೆಜ್ಜೆ ಹೇಗಿಡಲಿ ಮುಂದೆ - ಮೇಲೋ ಕೆಳಗೋ -
ಹೇಗೆ ಇತ್ತರು ಅಷ್ಟೆ, ಸೇರುವುದು ಅಲ್ಲೆ.

No comments:

Post a Comment